ಪಾಟ್ನಾದಲ್ಲಿ ನಿಗೂಢ ಘಟನೆ: ICICI ಲೊಂಬಾರ್ಡ್ ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆ!

ಪಾಟ್ನಾ: ನಿಗೂಢ ಘಟನೆಯೊಂದರಲ್ಲಿ ಐಸಿಐಸಿಐ ಲೊಂಬಾರ್ಡ್ ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ಶ್ಯುರೆನ್ಸ್ ಕಂಪನಿ ಐಸಿಐಸಿಐ ಲೊಂಬಾರ್ಡ್‌ನ ಬ್ರಾಂಚ್ ಮ್ಯಾನೇಜರ್ ಅಭಿಷೇಕ್ ವರುಣ್ ಎಂಬುವವರು ಭಾನುವಾರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು

ನಾಪತ್ತೆಗೂ ಮೊದಲು ಅವರು ತಮ್ಮ ಪತ್ನಿಗೆ ಮಾಡಿದ ಫೋನ್ ಕರೆಯಲ್ಲಿ ಅಪಘಾತಕ್ಕೀಡಾಗಿದ್ದೇನೆ ಎಂದು ಹೇಳಿದ್ದರು. ಆದರೆ ಅವರ ಶವ ನಂತರ ಬಾವಿಯಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಈಗ ಭಾರಿ ಅನುಮಾನ ಮೂಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾನುವಾರ ಕುಟುಂಬದ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಭಿಷೇಕ್, ನಂತರ ಪತ್ನಿ ಮಕ್ಕಳಿಗೆ ಅಲ್ಲಿಂದ ಹೊರಡಲು ಹೇಳಿದ್ದು, ತಾನು ನಂತರ ಬರುವುದಾಗಿ ಹೇಳಿದ್ದಾರೆ. ಆದರೆ ಇಂದು ಮುಂಜಾನೆ ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಅಭಿಷೇಕ್ ವರುಣ್ ಸಾವು ಅಪಘಾತದಿಂದ ಸಂಭವಿಸಿದಂತೆ ಕಾಣುತ್ತಿದೆ ಆದರೆ ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರ್ಯಕ್ರಮದಿಂದ ಮನೆಗೆ ಬಂದ ನಂತರ ಪತ್ನಿ ಅಭಿಷೇಕ್‌ಗೆ ಕರೆ ಮಾಡಿದ್ದಾರೆ. ಆಗ ಅಭಿಷೇಕ್ ತಾನು ಬರ್ತಾ ಇದ್ದು, ಮಾರ್ಗ ಮಧ್ಯೆ ಇದ್ದೇನೆ ಎಂದು ಹೇಳಿದ್ದಾರೆ. ಆದರೆ ನಂತರದಲ್ಲಿ ಅಭಿಷೇಕ್ ಪತ್ನಿಗೆ ಕರೆ ಮಾಡಿ ಅಪಘಾತಕ್ಕೀಡಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದಾದ ನಂತರ ಫೋನ್ ಕರೆ ಕಡಿತಗೊಂಡಿದೆ. ನಂತರ ಪತ್ನಿ ಮತ್ತೆ ಅಭಿಷೇಕ್‌ಗೆ ಕರೆ ಮಾಡಿದ್ದಾರೆ. ಆದರೆ ಫೋನ್ ಸ್ವಿಚ್‌ಅಪ್ ಆಗಿದೆ.
ಇತ್ತ ಕುಟುಂಬಕ್ಕೆ ಅಭಿಷೇಕ್ ಎಲ್ಲಿದ್ದಾರೋ ಎಂಬ ಬಗ್ಗೆ ಆತಂಕವಾಗಿದ್ದು, ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂದು ಮುಂಜಾನೆ ಅವರ ಶವ ಹಸನ್‌ಪುರದ ಕೃಷಿ ಭೂಮಿಯೊಂದರಲ್ಲಿನ ಬಾವಿಯಲ್ಲಿ ಪತ್ತೆಯಾಗಿದೆ. ಪಾಟ್ನಾದ ಕನಕರ್‌ಬಾಗ್‌ನಲ್ಲಿ ಅಭಿಷೇಕ್ ವರುಣ್ ಅವರ ಮನೆ ಇದ್ದು, ಈಗ ಶವ ಪತ್ತೆಯಾದ ಸ್ಥಳ ಅಲ್ಲಿಂದ 9 ಕಿಲೋ ಮೀಟರ್ ದೂರದಲ್ಲಿದೆ.
ಜುಲೈ 13 ರಂದು, ಅವರು ಪಾರ್ಟಿಯಲ್ಲಿ ಭಾಗವಹಿಸಿ ರಾತ್ರಿ 10 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಹೊರಟರು. ಅವರ ಕುಟುಂಬಕ್ಕೆ ಅವರು ಮಾಡಿದ ಕೊನೆಯ ಕರೆಯಲ್ಲಿ, ದ್ವಿಚಕ್ರ ವಾಹನದಿಂದ ತಾವು ಬಿದ್ದಿದ್ದು ಸುತ್ತಲೂ ಗೋಡೆಗಳಿವೆ ಎಂದು ಅವರು ಹೇಳಿದ್ದಾರೆ. ಪ್ರಾಥಮಿಕವಾಗಿ, ಇದು ಅಪಘಾತದಂತೆ ಕಾಣುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಭಿಷೇಕ್ ವರುಣ್ ಒಬ್ಬಂಟಿಯಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಯಾರೂ ಅವರನ್ನು ಹಿಂಬಾಲಿಸುತ್ತಿರಲಿಲ್ಲ. ಅದು ಕುಡಿದು ಸಂಭವಿಸಿದ ಅಪಘಾತವಾಗಿರಬಹುದು. ಆದರೆ ಪೊಲೀಸರು ಪ್ರತಿಯೊಂದು ಕೋನದಲ್ಲೂ ತನಿಖೆ ನಡೆಸುತ್ತಿದ್ದಾರೆ, ಅದು ಅಪಘಾತವೋ, ಆತ್ಮಹತ್ಯೆಯೋ ಅಥವಾ ಯಾವುದೇ ಅಕ್ರಮವೋ ಎಂದು ತನಿಖೆಯ ನಂತರ ತಿಳಿಯಲಿದೆ. ಅವರು ತಮ್ಮ ಕೊನೆಯ ಕರೆಯಲ್ಲಿ ಅಪಘಾತಕ್ಕೀಡಾಗಿರುವುದಾಗಿಯೂ ಹೇಳಿದ್ದಾರೆ. ಈಗ ನಾವು ಏನನ್ನೂ ಖಚಿತಪಡಿಸಲು ಸಾಧ್ಯವಿಲ್ಲ. ನಾವು ಪ್ರತಿಯೊಂದು ಕೋನದಲ್ಲೂ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಅಪರಾಧ ನಡೆದಿದ್ದರೆ, ಅದು ಮುನ್ನೆಲೆಗೆ ಬರುತ್ತದೆ. ಯಾವುದೇ ವದಂತಿಯನ್ನು ಹರಡಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.