ಮುಂಬೈನ ಕೋಟ್ಯಾಧಿಪತಿ ಭಿಕ್ಷುಕ: ಭರತ್ ಜೈನ್ ಮಾಸಿಕ ₹75,000 ಆದಾಯ, ₹7 ಕೋಟಿಗೂ ಅಧಿಕ ಆಸ್ತಿ!

ಮುಂಬೈ : ವ್ಯವಹಾರ ನಗರಿ ಮುಂಬೈನಲ್ಲಿ ಜನರು ಹೇಗೆ ಬೇಕಾದರೂ ಬದುಕಬಹುದು. ಇಲ್ಲಿ ಚಿಂದಿ ಆಯುವವರಿಂದ ಹಿಡಿದು ಅಂಬಾನಿಯವರೆಗೂ ಹಣ ಗಳಿಸುವ ಜನರಿದ್ದಾರೆ. ಬಹುತೇಕ ಉದ್ಯಮಿಗಳು, ವ್ಯಾಪಾರಿಗಳು ತಮ್ಮ ವಹಿವಾಟು ವಿಸ್ತರಣೆಗೆ ಮುಂಬೈ ಕಡೆ ಕಣ್ಣು ಹಾಯಿಸುವುದು ಗ್ಯಾರೆಂಟಿ.

ಆದರೆ ಇಲ್ಲೊಬ್ಬ ವ್ಯಕ್ತಿ ಮುಂಬೈನಲ್ಲಿ ಭಿಕ್ಷೆ ಬೇಡಿ (Mumbai Beggar) ಕೋಟ್ಯಂತರ ರೂ. ದುಡಿಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಹೆಸರು ಮಾಡಿದ್ದಾನೆ. ಈತನ ಮಾಸಿಕ ಆದಾಯ ಸುಮಾರು 75 ಸಾವಿರ ರೂ. ಈತನ ಒಟ್ಟಾರೆ ಆಸ್ತಿಯ ಮೊತ್ತ 7 ಕೋಟಿ ರೂ. ಗಳಿಗೂ ಹೆಚ್ಚಿದೆ ಎಂಬುದು ಆಘಾತಕಾರಿ ಸತ್ಯ!
ಈತನ ಹೆಸರು ಭರತ್ ಜೈನ್. ಸಿಎಸ್‌ಟಿ ಮತ್ತು ಆಜಾದ್ ಮೈದಾನದ ಆಚೆ ಈಚೆಯ ಬೀದಿಗಳಲ್ಲಿ ಒಂದು ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡುವುದು ಈತನ ಪೂರ್ಣ ಕಾಲಿಕ ವೃತ್ತಿ. ಕಳೆದ 40 ವರ್ಷಗಳಿಂದ ಭರತ್ ಜೈನ್ ಇದೇ ಕೆಲಸ ಮಾಡುತ್ತಿದ್ದಾನೆ. ಹೋಗಿಬರುವ ಹಾದಿಹೋಕರನ್ನೆಲ್ಲಾ ಏನಾದರೂ ಕೊಡಿ ಎಂದು ಬೇಡುವುದು ಈತನ ದಿನನಿತ್ಯದ ವಾಡಿಕೆ. ಆದರೆ ಈತನ ಸಂಪಾದನೆ ಕೇಳಿದರೆ ನೀವು ಸುಸ್ತಾಗೋದು ಗ್ಯಾರೆಂಟಿ
ಸಾಮಾನ್ಯವಾಗಿ ಪ್ರತಿದಿನಕ್ಕೆ ಭರತ್ ಜೈನ್ ಆದಾಯ 2000-2500 ರೂ. ಕೆಲವು ದಿನಗಳಲ್ಲಿ ಅದು ಇನ್ನೂ ಹೆಚ್ಚಾಗುವುದೂ ಉಂಟಂತೆ. ಒಟ್ಟಾರೆ ತಿಂಗಳಿಗೆ ಅವರ ಆದಾಯ ಕನಿಷ್ಠ 75 ಸಾವಿರ ರೂ. ಮುಂಬೈನಂತಹ ನಗರದಲ್ಲಿ ಇದು ಆಫೀಸಿನಲ್ಲಿ ಕುಳಿತು ಕೆಲಸ ಮಾಡುವ ಎಷ್ಟೋ ವೃತ್ತಿಪರರ ಮಾಸಿಕ ವೇತನಕ್ಕಿಂತ ಹೆಚ್ಚು.
ಭರತ್ ಅವರ ಕಥೆ ದಾನಧರ್ಮ ಮತ್ತು ವ್ಯವಹಾರದ ನಡುವೆ ಇರುವ ಗೆರೆಯನ್ನು ತೀರಾ ತೆಳ್ಳಗಾಗಿಸಿದೆ. ನಮ್ಮ ಆದಾಯದಲ್ಲಿ ಒಂದು ಅಂಶವನ್ನು ಬಡಬಗ್ಗರಿಗೆ, ಹಸಿದವರಿಗೆ, ನಿರ್ಗತಿಕರಿಗೆ ದಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂಬುದು ಎಲ್ಲಾ ಧರ್ಮಗಳಲ್ಲಿರುವ ನಂಬಿಕೆ. ಈ ನಂಬಿಕೆಯಿಂದಲೇ ಭರತ್ ಜೈನ್ ಗಳಿಸಿರುವ ಆಸ್ತಿಯ ಮೊತ್ತ 7.5 ಕೋಟಿ ರೂ. ಈತನಿಗೆ ಭಿಕ್ಷೆ ನೀಡುವವರೆಲ್ಲಾ ಇದುವರೆಗೂ ಹೇಗಿದ್ದರೋ ಹಾಗೆಯೇ ಉಳಿದಿದ್ದಾರೆ.
ಭರತ್ ತನ್ನ ಬಗ್ಗೆ ಹೀಗೆ ವರ್ಣಿಸಿಕೊಳ್ಳುತ್ತಾರೆ. ನಾನು ಯಾವುದೇ ಅಕ್ರಮ, ಕಾನೂನು ಬಾಹಿರ ಕೆಲಸ ಮಾಡುತ್ತಿಲ್ಲ. ನನ್ನ ಗಳಿಕೆಯನ್ನು ನಾನು ಶೇರು ಮಾರುಕಟ್ಟೆ ಇತರೆಡೆ ಹೂಡಿಕೆ ಮಾಡುತ್ತೇನೆ. ನನ್ನ ಮಗ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾನೆ. ನನಗೆ ವಾಸಿಸಲು 1.5 ಕೋಟಿ ರೂ. ಬೆಲೆಯ ಫ್ಲಾಟ್ ಇದೆ. ಹಾಗೇ 30 ಸಾವಿರ ರೂ. ಬಾಡಿಗೆ ತರುವ ಮಳಿಗೆಯೊಂದಿದೆ. ಮನೆಯವರ ವ್ಯವಹಾರಕ್ಕಾಗಿ ಒಂದು ಸ್ಟೇಷನರಿ ಅಂಗಡಿ ಹಾಕಿಕೊಟ್ಟಿದ್ದೇನೆ. ಇವೆಲ್ಲವರೂ ಸಾರ್ವಜನಿಕರು ಭಿಕ್ಷುಕರ ಕಡೆಗೆ ತೋರಿಸುವ ಸಹಾನುಭೂತಿಯಿಂದ ಆಗಿದೆ.
ಇನ್ನು ಮುಂದೆ ರಸ್ತೆಯಲ್ಲಿ ಯಾರಾದರೂ ಭಿಕ್ಷುಕರು ಸಿಕ್ಕಾಗ ಅವರು ಊಟಕ್ಕಾಗಿ ಬೇಡುತ್ತಿದ್ದಾರೆಯೋ ಅಥವಾ ಶೇರು ಖರೀದಿಸಲು ಬೇಡುತ್ತಿದ್ದಾರೆಯೋ ಎಂದು ಕೇಳಲು ಮಾತ್ರ ಮರೆಯಬೇಡಿ.
