ಮುಂಬೈ ಕಂದಮ್ಮ ಅಮೈರಾ ಕೊಲೆ ಪ್ರಕರಣ: ಮಲತಂದೆ ಇಮ್ರಾನ್ ಶೇಖ್ ಬಂಧನ!

ಮಂಬೈ :ಜನರನ್ನು ಚರ್ಚೆಗೆ ದೂಡಿದ್ದ 4 ವರ್ಷದ ಕಂದಮ್ಮ ಅಮೈರಾ ಶೇಖ್ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆಕೆಯ ಮಲತಂದೆ ಇಮ್ರಾನ್ ಶೇಖ್ನನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ.

ಮುಂಬೈನ ಆಂಟೋಪ್ ಬೆಟ್ಟದಲ್ಲಿರುವ ತನ್ನ ಮನೆಯಿಂದ ಜುಲೈ 14ರಂದು ಬಾಲಕಿ ಅಮೈರಾ ನಾಪತ್ತೆಯಾಗಿದ್ದಳು.
ಇದಾದ ಮಾರನೆಯ ದಿನವೇ ಕೊಲಬ ಸಮುದ್ರದ ದಡದಲ್ಲಿ ಆಕೆ ಶವ ಪತ್ತೆಯಾದಳು.
ಅಮೈರಾ ನಾಪತ್ತೆಯಾದ ಬಳಿಕ ಆಕೆಯ ತಾಯಿ ನಾಜಿಯಾ, ಆಂಟೋಪ್ ಪೋಲಿಸರಿಗೆ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಬಾಲಕಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಈ ವೇಳೆ ಅಮೈರಾ ಮಲತಂದೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಏಕೆಂದರೆ, ಇಮ್ಮು ಎಂದು ಕರೆಯಲ್ಪಡುವ ಇಮ್ರಾನ್, ಅಮೈರಾಳನ್ನು ರಾತ್ರಿ ಕರೆದುಕೊಂಡು ಹೋಗಿದ್ದು, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇಮ್ರಾನ್ನ ಈ ನಡೆ ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತಿದೆ ಎಂದು ವರದಿಯಾಗಿತ್ತು.
ಅಮೈರಾ ತನ್ನ ತಾಯಿ ನಾಜಿಯಾ ಹಾಗೂ ಮಲತಂದೆ ಇಮ್ರಾನ್ನೊಂದಿಗೆ ಬೆಂಗಾಲಿಪುರದ ರಾಜೀವ್ ನಗರದಲ್ಲಿ ವಾಸವಾಗಿದ್ದಳು. ನಾಜಿಯಾ ಮೊದಲು ಎರಡು ಮದುವೆಯಾಗಿದ್ದು, ಅವರಿಂದ ಪ್ರತ್ಯೇಕವಾದ ನಂತರ ಇಮ್ರಾನ್ನೊಂದಿಗೆ ಮೂರನೇ ಮದುವೆಯಾಗಿದ್ದಳು. ಇನ್ನು ಜುಲೈ 14ರಂದು ಮಗಳು ಕಾಣೆಯಾಗಿದ್ದರಿಂದ ಕೊಲಬ ಪೋಲಿಸರಿಗೆ ದೂರು ದಾಖಲಿಸಿದ್ದಳು. ಪೋಲಿಸರು ಬಾಲಕಿಯ ಹುಡುಕಾಟವನ್ನು ನಡೆಸುವಾಗ ಮಾರನೇ ದಿನ ಬಾಲಕಿ ಶವ ಸಸ್ಸೂನ್ ಡಾಕ್ ಬಳಿ ಪತ್ತೆಯಾಗಿದ್ದು, ಆಕೆಯ ದೇಹವನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಆರಂಭದಲ್ಲಿ ಆಂಟೋಪ್ ಪೋಲಿಸರು ಅಪಘಾತ ಸಾವಿನ ವರದಿ ಎಂದು ದಾಖಲಿಸಿದ್ದರು. ತದನಂತರ ಇಮ್ರಾನ್ ಶೇಖ್ ಕಾಣೆಯಾಗಿದ್ದರಿಂದ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಇನ್ನು ಪೋಲಿಸರ ವರದಿ ಪ್ರಕಾರ ಮಲತಂದೆ ಇಮ್ರಾನ್ ಅಮೈರಾಳನ್ನು ಕೊಲೆಮಾಡಿ ತದನಂತರ ಸಮುದ್ರಕ್ಕೆ ಎಸೆದಿರಬಹುದು ಎಂದು ನಂಬಿದ್ದಾರೆ.
ಈ ಬೆಳವಣಿಗೆಯ ನಂತರ ಪೊಲೀಸರು ಇಮ್ರಾನ್ನನ್ನು ಪತ್ತೆಹಚ್ಚಲು ಪ್ರಾರಂಭಿಸಿದ್ದು, ಮಂಗಳವಾರ ಆತನನ್ನು ಸೆರೆ ಹಿಡಿದಿದ್ದಾರೆ. ಇನ್ನು ಪೋಲಿಸರು ಈ ಕೃತ್ಯದ ಹಿಂದೆ ಇರುವ ಕಾರಣವನ್ನು ಭೇದಿಸಲು ತನಿಖೆ ಮುಂದುವರಿಸಿದ್ದಾರೆ.