ಮುಂಬೈ ಮಳೆ: ‘ಬಿಗ್ ಬಾಸ್ 19’ ಸೆಟ್‌ಗೆ ಹಾನಿ, ಮಾಧ್ಯಮ ಕಾರ್ಯಕ್ರಮ ರದ್ದು

ಮುಂಬೈನಲ್ಲಿ ಸುರಿದ ಮಳೆ ಸಾಕಷ್ಟು ಹಾನಿಯನ್ನುಂಟುಮಾಡಿದೆ. ರೈಲು, ವಿಮಾನ ಮತ್ತು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯ ಜನರ ಜೀವನ ಕೂಡ ಸಹ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ, ಅನೇಕ ಸ್ಥಳಗಳಲ್ಲಿ ನೀರು ಸಂಗ್ರಹವಾಗಿದೆ. ಮಳೆಯು ಕೆಲವು ಸಿನಿಮಾ, ಧಾರಾವಾಹಿ ಮತ್ತು ಕೆಲವು ಶೋಗಳ ಶೂಟಿಂಗ್ ಮೇಲೂ ಪರಿಣಾಮ ಬೀರಿದೆ. ಹೆಚ್ಚು ಚರ್ಚಿಸಲ್ಪಟ್ಟ ಮತ್ತು ಪ್ರತಿಷ್ಠಿತ ‘ಬಿಗ್ ಬಾಸ್ 19′ ಸೆಟ್ಗೂ ತೊಂದರೆ ಆಗಿದೆ ಎನ್ನಲಾಗಿದೆ.

ಬಿಗ್ ಬಾಸ್ ಮನೆಯನ್ನು ಮಾಧ್ಯಮಗಳಿಗೆ ತೋರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮನೆ ಹೇಗಿದೆ ಎಂಬುದನ್ನು ರಿವೀಲ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ನಗರದ ಹಲವು ಭಾಗಗಳಲ್ಲಿ ನೀರು ನಿಂತ ಕಾರಣ, ಜಿಯೋ ಹಾಟ್‌ಸ್ಟಾರ್ ತಂಡ ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
‘ನಗರದಲ್ಲಿ ಭಾರೀ ಮಳೆಯಿಂದಾಗಿ, ಹಲವೆಡೆ ನೀರು ಸಂಗ್ರಹವಾಗಿದೆ. ಆದ್ದರಿಂದ, ಬಿಗ್ ಬಾಸ್ ಮನೆಯ ಪ್ರವಾಸ ಮತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನಾವು ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ’ ಎಂದು ಹಾಟ್‌ಸ್ಟಾರ್ ತಂಡ ಸ್ಪಷ್ಟಪಡಿಸಿದೆ.
‘ಬಿಗ್ ಬಾಸ್ 19’ರ ಹೊಸ ಮನೆಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ಉಳಿದ ಯಾವುದೇ ಸಿನಿಮಾ ಶೂಟ್ ಮೇಲೆ ಈ ಮಳೆ ಪರಿಣಾಮ ಬೀರಿಲ್ಲ. ಬಹುತೇಕ ಎಲ್ಲಾ ಶೂಟಿಂಗ್‌ಗಳು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ನಡೆಯುತ್ತಿವೆ. ಫಿಲ್ಮ್ ಸಿಟಿಯ ಕೆಲವು ಸ್ಥಳಗಳಲ್ಲಿ ನೀರು ಸಂಗ್ರಹವಾಗಿದೆ. ಬಿಗ್ ಬಾಸ್ ಅಂದುಕೊಂಡ ದಿನಾಂಕದಂದೇ ಆರಂಭ ಆಗಲಿದೆಯಂತೆ.
‘ಬಿಗ್ ಬಾಸ್ 19′ ಆಗಸ್ಟ್ 24 ರಂದು ಆರಂಭ ಆಗಲಿದೆ. ಈ ಹೊಸ ಸೀಸನ್ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಕಾರ್ಯಕ್ರಮದಲ್ಲಿ ರಾಜಕೀಯ ಥೀಮ್ ಬಗ್ಗೆ ನಿರೂಪಕ ಸಲ್ಮಾನ್ ಖಾನ್ ಈ ಹಿಂದೆಯೇ ಮಾಹಿತಿ ನೀಡಿದ್ದರು. ಈಗ ಹೊಸ ಮನೆಯ ಒಂದು ನೋಟವನ್ನು ಶೀಘ್ರದಲ್ಲೇ ಪ್ರೇಕ್ಷಕರಿಗೆ ತೋರಿಸಲಾಗುವುದು. ಆದರೆ ಅದಕ್ಕಾಗಿ ಪ್ರೇಕ್ಷಕರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಈ ಬಾರಿ ಐದು ತಿಂಗಳ ಕಾಲ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸಲ್ಲು ಜೊತೆ ಇತರ ಕೆಲವರು ಶೋನ ನಡೆಸಿಕೊಡಲಿದ್ದಾರೆ.
