ಮುಂಬೈ ಮಳೆಯ ಅರ್ಭಟ: ರೆಡ್ ಅಲರ್ಟ್ ಘೋಷಣೆ, ಟ್ರಾಫಿಕ್ ಜಾಮ್

ಮುಂಬೈ: ಮಹಾರಾಷ್ಟ್ರದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಂದು ಬೆಳಗ್ಗೆ ಭಾರೀ ಮಳೆಯಿಂದಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಗರಿಷ್ಠ 54 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇನ್ನೂ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 72 ಮಿ.ಮೀ. ಮತ್ತು 65 ಮಿ.ಮೀ. ಮಳೆಯಾಗಿದೆ. ಹಾಗಾಗಿ ಮುಂಬೈ ಮಹಾನಗರ ಪಾಲಿಕೆಯು, ಅನಗತ್ಯ ಓಡಾಟ ನಿಲ್ಲಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮೀನುಗಾರರು ಕಡಲಿಗಿಳಿಯದಂತೆ ಸೂಚಿಸಿದೆ.
ವಿಮಾನ ಹಾರಟಕ್ಕೂ ತೊಂದರೆ
ಮಳೆಯಿಂದಾಗಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಮುನ್ನ 9 ವಿಮಾನಗಳು ಹಲವು ಸುತ್ತುಗಳನ್ನು ಹಾಕಿ ನಂತರ ಪ್ರಯಾಸದಿಂದ ಇಳಿದಿವೆ. ಒಂದು ವಿಮಾನವನ್ನ ಸೂರತ್‌ಗೆ ಮಾರ್ಗ ಬದಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು ಹಲವು ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ರೆಡ್ ಅಲರ್ಟ್ ಘೋಷಣೆ
ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕೆಲವು ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಮಂಗಳವಾರ ಸಹ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹೇಳಿದೆ.
ರೈಲು ಸಂಚಾರದಲ್ಲಿ ವಿಳಂಬ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೇಂದ್ರೀಯ ರೈಲ್ವೆಯ ಉಪನಗರ ರೈಲು ಸಂಚಾರದಲ್ಲೂ ಸಮಸ್ಯೆ ಎದುರಾಗಿದೆ. ಕೆಲವು ಪ್ರದೇಶಗಳಲ್ಲಿ ಹಳಿಗಳು ಮುಳುಗಿವೆ. ಕುರ್ಲ ಮತ್ತು ತಿಲಕ್ ನಗರ ನಿಲ್ದಾಣಗಳ ನಡುವೆ ಚಾರ್ಜಿಂಗ್ ಪಾಯಿಂಟ್‌ಗಳೇ ಗೋಚರಿಸದಂತಾಗಿದೆ. ಹೀಗಾಗಿ ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ಆದ್ರೆ ಯಾವುದೇ ಸಂಚಾರ ಸ್ಥಗಿತಗೊಳಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
