ಮುಂಬೈ ಆಕಾಶವಾಣಿ ಕ್ಯಾಂಟೀನ್ ವಿವಾದ: ಹಳಸಿದ ದಾಲ್ ನೀಡಿದ ಆರೋಪಕ್ಕೆ ಶಾಸಕರಿಂದ ಹಲ್ಲೆ

ಮುಂಬೈ: ನಗರದ ಆಕಾಶವಾಣಿ ಶಾಸಕರ ಕ್ಯಾಂಟೀನ್‌ನಲ್ಲಿ ಹಳಸಿದ ದಾಲ್ ಬಡಿಸಿದ್ದಕ್ಕೆ ಶಿವಸೇನಾ ಶಾಸಕ ಕ್ಯಾಂಟೀನ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುಂಬೈನ ಆಕಾಶವಾಣಿ ಶಾಸಕರ ಕ್ಯಾಂಟೀನ್ ಬಳಿ ಘಟನೆ ನಡೆದಿದ್ದು, ಬುಲ್ದಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್, ಎಂಎಲ್‌ಎಗೇ ಹಳಸಿದ ದಾಲ್ ನೀಡುತ್ತಿದ್ದೀರಾ? ಎಂದು ಕ್ಯಾಂಟೀನ್ ಮಾಲೀಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ಶಾಸಕ ಸಂಜಯ್ ಗಾಯಕ್ವಾಡ್ ಕ್ಯಾಂಟೀನ್‌ನಲ್ಲಿ ಥಾಲಿಯನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಾಲ್ ದುರ್ವಾಸನೆ ಬರುತ್ತಿದ್ದರಿಂದ ಶಾಸಕರು ಕ್ಯಾಂಟೀನ್‌ಗೆ ಹೋಗಿ ಬೇಳೆಯನ್ನು ತಯಾರಿಸಿದ ಸಿಬ್ಬಂದಿಯನ್ನ ಕೇಳಿದ್ರು. ಬಳಿಕ ಅಲ್ಲೇ ಇದ್ದ ಜನರನ್ನ ಕರೆದು ದಾಲ್ ಪ್ಯಾಕೆಟ್ ಅನ್ನು ತೋರಿಸಿದ್ದಾರೆ. ದಾಲ್ ತಯಾರಿಸಿದವನಿಗೂ ಅದರ ದುರ್ವಾಸನೆ ತೋರಿಸಿ ಬಳಿಕ ಮುಖಕ್ಕೆ ರಪ್ಪನೆ ಬಾರಿಸಿದ್ದಾರೆ.
ಇದನ್ನು ನನಗೆ ಕೊಟ್ಟವನು ಯಾರು? ಇದರ ವಾಸನೆ ನೋಡಿ. ಇದನ್ನು ಪ್ಯಾಕ್ ಮಾಡಿ, ಆಹಾರ ಇಲಾಖೆಗೆ ಕರೆ ಮಾಡಿ. ನೀವು ಈ ಹಳಸಿದ ಪದಾರ್ಥವನ್ನು ಶಾಸಕರಿಗೆ ನೀಡುತ್ತಿದ್ದೀರಿ. ಇನ್ನು ಜನಸಾಮಾನ್ಯರಿಗೆ ಏನು ನೀಡುತ್ತಿದ್ದೀರಿ? ಇಂತಹ ಹಳಸಿದ ಆಹಾರ ಸೇವಿಸಿದರೆ ಜನರು ಸಾಯಬಹುದು ಎಂದು ಹೇಳಿದ್ದಾರೆ.

ಬಳಿಕ ಕ್ಯಾಂಟೀನ್‌ನ ಸಿಬ್ಬಂದಿ ಬಳಿ ಮಾಲೀಕನಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಕ್ಯಾಂಟೀನ್ ಮಾಲೀಕ ಬಂದಾಗ ಶಾಸಕ ದಾಲ್ ಪ್ಯಾಕೇಟ್ ತೆರೆದು ಆತನಿಗೆ ತೋರಿಸಿದರು. ಆತನ ದಾಲ್ ಪ್ಯಾಕೆಟ್ ನೋಡಿ ತಲೆ ಎತ್ತುವಾಗ ಶಾಸಕರು ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಪುನಃ ಎರಡ್ಮೂರು ಬಾರಿ ಹೊಡೆದಿದ್ದಾರೆ. ಈ ವೇಳೆ ಕ್ಯಾಂಟೀನ್ ಮಾಲೀಕ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಶಾಸಕರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
