ಟ್ರಂಪ್ ಹೆಸರಿನಲ್ಲಿ ಕೋಟ್ಯಂತರ ವಂಚನೆ: ಹಾವೇರಿಯಲ್ಲಿ ಸೈಬರ್ ಮೋಸದ ಬಲೆ

ಹಾವೇರಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿನಲ್ಲಿ ಸೈಬರ್ ಕಳ್ಳರು ಕೋಟ್ಯಂತರ ರೂ. ಹಣ ವಂಚನೆ ಮಾಡಿರುವಂತಹ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿಯ ಸೈಬರ್ ಕಳ್ಳರು ಜಿಲ್ಲೆಯ 15 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾರೆ.
ಮಾತ್ರವಲ್ಲದೇ ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ತಮ್ಮ ಕೈಚಳಕ ತೋರಿದ್ದಾರೆ.
ವರದಿಗಳ ಪ್ರಕಾರ ಖದೀಮರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಕುರಿತು ಜಾಹೀರಾತು ಒಂದನ್ನು ಹರಿಬಿಟ್ಟು, ಆಯಪ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಜಾಹೀರಾತಿನಲ್ಲಿ ನೀಡಿದ ನಂಬರ್‌ಗೆ ಕರೆ ಮಾಡಿದರೆ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಬಹುದು ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿದ್ದ ಹಲವಾರು ಜನರು ಜಾಹೀರಾತಿನಲ್ಲಿ ನೀಡಿದ್ದ ನಂಬರ್‌ಗೆ ಕರೆ ಮಾಡಿ, ವಂಚನೆಗೆ ಒಳಗಾಗಿದ್ದಾರೆ.
ಆರಂಭದಲ್ಲಿ ಜನರನ್ನು ನಂಬಿಸುವ ಉದ್ದೇಶದಿಂದ ಟ್ರಂಪ್‌ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ಹಾಗೂ ಬಡ್ಡಿ ಹಣ ನೀಡಿದ್ದಾರೆ. ಇದರಿಂದ ಜನರು ಲಾಭದ ಆಸೆಗೆ ಹೆಚ್ಚಿನ ಹಣವನ್ನು ಹಾಕಲು ಆರಂಭಿಸಿದ್ದಾರೆ. ಜನ ಹೆಚ್ಚು ಹಣ ಹಾಕಲು ಆರಂಭಿಸಿದಾಗ ಸೈಬರ್ ಕಳ್ಳರು ಆಪ್ ಅನ್ನು ಲಾಕ್ ಮಾಡಿದ್ದಾರೆ ಎನ್ನಲಾಗಿದೆ.