ಮುಡಾ ಪ್ರಕರಣ:ರಾಜಕೀಯವಾಗಿ ಇಡಿಯನ್ನು ಬಳಸಿಕೊಳ್ಳಲು ಹೋಗಿ ಬಿಜೆಪಿಗೆ ಮುಖಭಂಗ

ನವದೆಹಲಿ: ಮುಡಾ ಕೇಸ್‍ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಅನ್ನು ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇ.ಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠ, ಇಡಿಯನ್ನು ತೀವ್ರವಾಗಿ ಟೀಕಿಸಿದೆ.

“ರಾಜಕಾರಣಿಗಳು ರಾಜಕೀಯ ಮಾಡಿಕೊಳ್ಳಲಿ, ಇದರಲ್ಲಿ ನಿಮಗೆ ಏನು ಕೆಲಸ? ಬಾಯಿ ತೆರೆಯಲು ನಮಗೆ ಬಲವಂತ ಮಾಡಬೇಡಿ, ಇಲ್ಲದಿದ್ದರೆ ಇಡಿ ಬಗ್ಗೆ ತೀಕ್ಷ್ಣ ಟಿಪ್ಪಣಿ ಮಾಡಬೇಕಾಗುತ್ತದೆ,” ಎಂದು ಸಿಜೆಐ ಎಚ್ಚರಿಕೆ ನೀಡಿದರು. “ಇದರ ಬಗ್ಗೆ ನನಗೆ ಮಹಾರಾಷ್ಟ್ರದಲ್ಲಿ ಕೆಲವು ಅನುಭವಗಳಿವೆ, ದೇಶದಾದ್ಯಂತ ನೀವು ಇದನ್ನು ಮುಂದುವರಿಸಬಾರದು,” ಎಂದು ಇಡಿ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಅವರೊಂದಿಗೆ ಕಠಿಣವಾಗಿ ಮಾತನಾಡಿದರು.
ಮುಂದುವರಿದು, ಏಕಸದಸ್ಯ ಪೀಠದ ತೀರ್ಪಿನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲವೆಂದು ಹೇಳಿ, ಇಡಿ ಮೇಲ್ಮನವಿಯನ್ನು ವಜಾಗೊಳಿಸಿದರು. ಇದರಿಂದಾಗಿ ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ನಿರಾಳರಾದಂತಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಇಡಿ ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು.
ಇದರೊಂದಿಗೆ ಮುಡಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ಣಯವು ಬಿಜೆಪಿಗೆ ಕಪಾಳಕ್ಕೆ ನ್ಯಾಯದಂಡ ಬಾರಿಸಿದಂತಾಗಿದೆ. ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ದುರುದ್ದೇಶಪೂರ್ವಕವಾಗಿ ನನ್ನ ಪತ್ನಿ ವಿರುದ್ಧ ಮುಡಾ ಕುರಿತು ಸುಳ್ಳು ಆರೋಪಗಳನ್ನು ಹೊರೆಸಿತ್ತು. ಬಿಜೆಪಿ ಸೃಷ್ಟಿಸಿದ್ದ ನಕಲಿ ಪ್ರಚಾರ, ಸುಳ್ಳು ಆರೋಪಗಳ ಕಂತೆ ಮತ್ತು ತಿಂಗಳುಗಟ್ಟಲೆ ನಡೆದ ಪ್ರತಿಭಟನೆಗಳು ವ್ಯರ್ಥವಾಗಿವೆ.” ಬಿಜೆಪಿ ಈಗ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು,” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
