ಲಂಡನ್ ಕೆಲಸದ ಆಮಿಷವೊಡ್ಡಿ ಎಂಎಸ್ಸಿ ಪದವೀಧರನ ಕೊಲೆ; ಮೂವರ ಬಂಧನ

ಚಿಕ್ಕಬಳ್ಳಾಪುರ: ಆತ ಎಂಎಸ್ಸಿ ಇನ್ ಅಗ್ರಿಕಲ್ಚರ್ ಪದವಿ ಮಾಡಿದ್ದು, ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಉಪನ್ಯಾಸಕರಾಗಿ (Lecturer) ಕೆಲಸ ಮಾಡುತ್ತಿದ್ದರು. ಇಂತಹ ಪದವೀಧರನಿಗೆ ಪಿಯುಸಿ ಫೇಲ್ ಆದ ಯುವಕನೊರ್ವ ಬೆಂಗಳೂರಲ್ಲಿ ಕೆಲಸ ಮಾಡಿದರೆ ನಿನಿಗೆ ಏನು ಬರುತ್ತೆ?

ಲಂಡನ್ನಲ್ಲಿ ಕೆಲಸ ಕೊಡುತ್ತೇನೆ, ಲಕ್ಷ ಲಕ್ಷ ಸಂಬಳ ಸಿಗುತ್ತೆ ಅಂತ ಹೇಳಿ ನಂಬಿಸಿ ಬಳಿಕ ಆತನ ಬಳಿಯೇ ಲಕ್ಷಾಂತರ ರೂ ಪಡೆದು ವಂಚಿಸಿದ್ದಾರೆ. ಕೊನೆಗೆ ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಲಂಡನ್ಗೆ ಕರೆದುಕೊಂಡು ಹೋಗುತ್ತೇವೆ ಅಂತ ಕರೆದುಕೊಂಡು ಹೋಗಿ ಕೊಲೆ (kill) ಮಾಡಿದ್ದಾರೆ.
ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ತೋಟದ ಬಾವಿಯಲ್ಲಿ ಶವ ಒಂದು ಪತ್ತೆ ಆಗಿತ್ತು. ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಸುಧಾಕರ್, ಮನೋಜ್ ಮತ್ತು ಮಂಜುನಾಥ್ರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ ರಾಮಪುರ ಗ್ರಾಮದ ರಾಮಾಂಜಿ (30) ಕೊಲೆಯಾದ ವ್ಯಕ್ತಿ.
ನಡೆದಿದ್ದೇನು?
ತಂದೆ, ತಾಯಿ ತೀರಿಕೊಂಡಿದ್ದು, ಅಣ್ಣ-ಅತ್ತಿಗೆ ಮಾಡಿದ್ದಾರೆ. ಇನ್ನೂ ಎಂಎಸ್ಸಿ ಪದವೀಧರನಾಗಿದ್ದ ರಾಮಾಂಜಿ, ಬೆಂಗಳೂರಿನ ಯಲಹಂಕದಲ್ಲಿ ಕೊಚಿಂಗ್ ಸೆಂಟರ್ನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ. ಆದರೆ ಈತನ ದುರಾದೃಷ್ಟಕ್ಕೆ ಇದೇ ರಾಮಾಂಜಿ ಸ್ವಗ್ರಾಮ ಜಿ ರಾಮಪುರದ ಪಕ್ಕದಲ್ಲೇ ಇರುವ ದೊಡ್ಡ ಗುಟ್ಟಹಳ್ಳಿಯ ಸುಧಾಕರ್ ಎಂಬಾತನ ಪರಿಚಯವಾಗಿದೆ. ಬೆಂಗಳೂರಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್, ನೀನು ಡಿಗ್ರಿ ಮಾಡಿದ್ದೀಯಾ, ಇಲ್ಲಿ ಕೆಲಸ ಮಾಡಿದರೆ ಸಾವಿರಾರು ರೂ ಅಷ್ಟೇ ಸಂಬಂಳ. ಅದೇ ಲಂಡನ್ನಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ ಸಂಬಳ ಕೊಡುತ್ತಾರೆ ಎಂದು ನಂಬಿಸಿದ್ದಾನ
ನನಗೆ ಅವರು ಗೊತ್ತು, ಇವರು ಗೊತ್ತು ನಿನಗೆ ಲಂಡನ್ನಲ್ಲಿ ಕೆಲಸ ಕೊಡಿಸಿತ್ತೇನೆ. ಆದರೆ ಅದಕ್ಕೆ ಮೊದಲೇ ಅವರಿಗೆ ದುಡ್ಡು ಕೊಡಬೇಕು ಅಂತ ನಯವಾದ ಮಾತುಗಳಿಂದ ಸುಮಾರು 11 ಲಕ್ಷ ರೂ ಹಣ ಪಡೆದುಕೊಂಡು ಮೋಜು, ಮಸ್ತಿ ಮಾಡಿ ವಂಚನೆ ಮಾಡಿದ್ದಾನೆ. ರಾಮಾಂಜಿ ಯಾವಾಗ ಕೆಲಸ ಕೊಡಿಸುತ್ತೀಯಾ ಅಂತ ಕೇಳಿದ್ದಕ್ಕೆ ಇಂದು, ನಾಳೆ ಆಗುತ್ತೆ. ವೀಸಾ ಸಮಸ್ಯೆ ಅಂತ ಕಥೆ ಹೊಡ್ಕೊಂಡು ಕೆಲವು ಸರಿ ಏರ್ಪೋರ್ಟ್ಗೆ ಕರೆದುಕೊಂಡು ಹೋಗಿ ಅಲ್ಲಿಂದ ಏನೋ ಕಾರಣ ಹೇಳಿ ವಾಪಾಸ್ ಕರೆದುಕೊಂಡು ಬಂದು ದಿನ ಕಳೆದಿದ್ದಾನೆ.

ಇತ್ತ ರೋಸಿ ಹೋದ ರಾಮಾಂಜಿ, ಕೆಲಸ ಕೊಡಿಸು, ಇಲ್ಲ ದುಡ್ಡು ವಾಪಾಸ್ ಕೊಡು ಅಂತ ಗಟ್ಟಿಯಾಗಿ ಕೇಳಿದ್ದೇ ತಡ, ಕೊನೆಗೆ ಉಪನ್ಯಾಸ ರಾಮಾಂಜಿಯನ್ನು ಲಂಡನ್ಗೆ ಕರೆದುಕೊಂಡು ಹೋಗುವುದರ ಬದಲು ನೇರವಾಗಿ ಯಮಲೋಕ್ಕೆ ಕಳುಹಿಸಿದ್ದಾನೆ.
ಹೌದು.. ಕೊಟ್ಟ ದುಡ್ಡನ್ನ ರಾಮಾಂಜಿ ಯಾವಾಗ ಕೇಳಿದ್ನೋ, ಆಗ ಸುಧಾಕರ್ ರಾಮಾಂಜಿಯನ್ನೇ ಕೊಲೆ ಮಾಡುವ ಪ್ಲ್ಯಾನ್ ಮಾಡಿದ್ದಾನೆ. ತನ್ನ ಸಹೋದರ ಮನೋಜ್ ಹಾಗೂ ತನ್ನ ಸಹೋದ್ಯೋಗಿ ಮಂಜುನಾಥ್ ಜೊತೆ ಸೇರಿ ರಾಮಾಂಜಿ ಹತ್ಯೆಗೆ ಸಂಚು ರೂಪಿಸಿದ್ದಾರೆ. ಬಾಡಿಗೆಗೆ ಅಂತ ಥಾರ್ ಕಾರು ಪಡೆದು ಸೀದಾ ರಾಮಾಂಜಿ ಮನೆಗೆ ಹೋಗಿ ಬಾ ಕೆಲಸ ಕನ್ಪರ್ಮ್ ಆಯ್ತು ನಿನ್ನ ಲಂಡನ್ಗೆ ಕಳುಹಿಸಿ ಕೊಡುತ್ತೇವೆ ಅಂತ ಜೂನ್ 16 ರಂದು ಕಾರಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಕಾರಿನಲ್ಲಿ ಕೊಲೆ: ಸೈಜುಗಲ್ಲು ಕಟ್ಟಿ ಶವ ಬಾವಿಗೆ ಹಾಕಿದ ಆರೋಪಿಗಳು
ಆದರೆ ಜೂನ್ 16 ರಂದು ಫ್ಲೈಟ್ ಟಿಕೆಟ್, ವೀಸಾ ಪ್ರಾಬ್ಲಂ ಅಂತ ಹೇಳಿ, ಚಿಂತಾಮಣಿಯ ಲಾಡ್ಜ್ನಲ್ಲಿ ಕಾಲ ಕಳೆದಿದ್ದಾರೆ. ಮರು ದಿನ ಸೀದಾ ಏರ್ಪೋರ್ಟ್ಗೆ ಹೋಗೋಣ ಅಂತ ಹೊರಟವರು ಮಧ್ಯ ದಾರಿಯಲ್ಲಿ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ಬಳಿ ಥಾರ್ ಕಾರಿನಲ್ಲಿ ಮುಂಬದಿ ಕೂತಿದ್ದವನ ಕುತ್ತಿಗೆಯನ್ನ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೊದಲೇ ನೋಡಿದ್ದ ಕೆಂಪದೇನಹಳ್ಳಿ ಬಳಿಯ ಬಾವಿಯಲ್ಲಿ ರಾಮಾಂಜಿ ಮೃತದೇಹಕ್ಕೆ ದೊಡ್ಡ ದೊಡ್ಡ ಸೈಜುಗಲ್ಲುಗಳನ್ನ ಕಟ್ಟಿ ಶವ ಮೇಲೆ ಬರಬಾರದು ಅಂತ ಬಾವಿಗೆ ಬಿಸಾಡಿದ್ದಾರೆ. ಆದರೆ 5 ದಿನಕ್ಕೆ ರಾಮಾಂಜಿ ಮೃತದೇಹ ಬಾವಿಯಿಂದ ಮೇಲೆ ಬಂದು ತೇಲಾಡಿ ಪ್ರಕರಣ ಬಯಲಾಗಿತ್ತು.
ಅಪ್ಪ-ಅಮ್ಮ ಇಲ್ಲದ ರಾಮಾಂಜಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲ್ಲ ಡೆಡ್ ಬಾಡಿನೂ ಬಾವಿಯಿಂದ ಮೇಲೆ ಬರಲ್ಲ ಅಂತ ಕೊಲೆ ಮಾಡಿದ ಆರೋಪಿಗಳಾದ ಸುಧಾಕರ್, ಮನೋಜ್, ಮಂಜುನಾಥ್ ಆರಾಮವಾಗಿದ್ದರು. ಆದರೆ 5 ದಿನದ ನಂತರ ಬಾವಿಯಿಂದ ಬಾಡಿ ಆಚೆ ಬರ್ತಿದ್ದಂತೆ ಮೃತದೇಹದ ಫೋಟೋ, ವಿಡಿಯೋ ಸ್ಥಳೀಯವಾಗಿ ಎಲ್ಲಾ ಕಡೆ ವೈರಲ್ ಆಗಿತ್ತು. ಇದನ್ನೇ ಕಂಡಿದ್ದ ರಾಮಾಂಜಿ ಅಣ್ಣ-ಅತ್ತಿಗೆ ಇದು ನಮ್ಮ ರಾಮಾಂಜಿನೇ ಅಂತ ಕನ್ಪರ್ಮ್ ಮಾಡಿದ್ದರು. ಹೀಗಾಗಿ ಕೊಲೆ ಮಾಡಿದ ಆರೋಪಿಗಳನ್ನು ಇದೀಗ ಪೊಲೀಸರು ಜೈಲಿಗಟ್ಟಿದ್ದು, ಕಂಬಿ ಎಣಿಸುವಂತಾಗಿದೆ
