ಕನ್ನಡ ಚಿತ್ರರಂಗದಲ್ಲಿ ಸೂತಕ: ಖ್ಯಾತ ಹಿರಿಯ ರಂಗ ಕಲಾವಿದ, ಹಾಸ್ಯ ನಟ ರಾಜು ತಾಳಿಕೋಟೆ ನಿಧನ; ಕಂಬನಿ ಮಿಡಿದ ಉತ್ತರ ಕರ್ನಾಟಕದ ರಂಗಭೂಮಿ

ವಿಜಯಪುರ/ಬೆಂಗಳೂರು: ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ಅನಾರೋಗ್ಯದಿಂದ ನಿಧನರಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು.

ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಾಟಕ ಹಾಗೂ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇಂದು ಹಠಾತ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ರಾಜು ತಾಳಿಕೋಟಿಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.
ರಂಗಭೂಮಿಯ ‘ಖಾಸ್ಗತೇಶ್ವರ’ ಮಾಲೀಕ
ರಾಜು ತಾಳಿಕೋಟಿಯವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ ಎಂದಾಗಿತ್ತು. ಅವರು ಕೇವಲ ನಟನಾಗಿರದೆ, ತಾಳಿಕೋಟಿಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕರೂ ಆಗಿದ್ದರು. ಅವರ ಜೀವನದ ಬಹುಪಾಲು ಸಮಯವನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸುವುದರಲ್ಲಿಯೇ ಕಳೆದಿದ್ದರು.
ಕುಡುಕನ ಪಾತ್ರಗಳಿಗೆ ಜನಪ್ರಿಯತೆ
ರಾಜು ತಾಳಿಕೋಟಿಯವರು ಉತ್ತರ ಕರ್ನಾಟಕದ ಶೈಲಿಯ ಭಾಷೆ ಮತ್ತು ಉಡುಗೆ-ತೊಡುಗೆಯೊಂದಿಗೆ ಹಾಸ್ಯ ಮತ್ತು ಬೋಧಪ್ರದ ಪಾತ್ರಗಳನ್ನು ಮಾಡುತ್ತಿದ್ದರಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅದರಲ್ಲೂ ವಿಶೇಷವಾಗಿ, ಕುಡುಕನ ಪಾತ್ರಗಳಲ್ಲಿ ಅವರ ಅಭಿನಯ ಅತ್ಯಂತ ಲೀಲಾಜಾಲವಾಗಿರುತ್ತಿತ್ತು. ‘ಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಅವರ ಪ್ರಖ್ಯಾತ ನಾಟಕಗಳಾಗಿದ್ದು, ಈ ನಾಟಕಗಳ ಆಡಿಯೊ ಕ್ಯಾಸೆಟ್ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮನೆಮಾತಾಗಿದ್ದವು.
ಸಿನಿಮಾ ರಂಗದಲ್ಲಿ ಹಾಸ್ಯ ನಟನಾಗಿ ಯಶಸ್ಸು:
ರಂಗಭೂಮಿಯಲ್ಲಿ ಅಪಾರ ಅನುಭವ ಪಡೆದ ನಂತರ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಪ್ರಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ನಂತರ ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’ ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಅವರ ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಉತ್ತರ ಕರ್ನಾಟಕದ ಕಲಾರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. ಅವರ ಅಂತಿಮ ವಿಧಿವಿಧಾನಗಳು ತಾಳಿಕೋಟಿ ನಗರದಲ್ಲಿ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.