ಮತಧರ್ಮ ಮರೆತು ಹಸುಗೂಸಿಗೆ ಆಸರೆಯಾದ ಮಹಾತಾಯಿ! ಅಪಘಾತದಲ್ಲಿ ಗಾಯಗೊಂಡ 3 ತಿಂಗಳ ಮಗುವಿಗೆ 3 ಗಂಟೆ ಕಾಲ ಚಿಕಿತ್ಸೆ ಕೊಡಿಸಿದ ಚಂದ್ರಪ್ರಭಾ ಗೌಡ.

ಪುತ್ತೂರು: ನಗರದಲ್ಲೊಂದು ಭೀಕರ ಅಪಘಾತ, ನಜ್ಜುಗುಜ್ಜಾದ ಆಟೋ ರಿಕ್ಷಾ, ಗಂಭೀರ ಗಾಯಗೊಂಡ ಆರು ಜನ. ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ್ರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ನರಳಾಡಿ ಜೀವ ಬಿಟ್ಟಿತ್ತು. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ ನಜ್ಜುಗುಜ್ಜಾಗಿ ಒಳಗಿದ್ದ ಕೆಲವರು ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಮಾತೃಹೃದಯದ ಮಹಾತ್ಕಾರ್ಯಕ್ಕೆ ಜನರು ಶಾಭಾಶ್ ಎನ್ನುತ್ತಿದ್ದಾರೆ.

ಹೌದು ಅದೊಂದು ಭೀಕರ ಅಪಘಾತ. ಕಾರಿನ ದಾಳಿಗೆ ಸಿಲುಕಿದ ರಿಕ್ಷಾ ನಜ್ಜುಗುಜ್ಜಾಗಿ ಒಳಗಿದ್ದ ಆರು ಜನ ಗಂಭೀರ ಗಾಯಗೊಂಡಿದ್ದಾರೆ. ತಲೆಗೆ ಏಟಾಗಿದ್ದ ಮೂರು ತಿಂಗಳ ಹಸುಳೆಯ ಮೂಗಿನಿಂದ ರಕ್ತ ಒಸರುತ್ತಿದೆ. ತಾಯಿ ಸ್ವತಃ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆ. ಬಂಧುಗಳೆಲ್ಲ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇಂಥಹದೊಂದು ದುರ್ಭರ ಸನ್ನಿವೇಶದಲ್ಲಿ ಈ ತಾಯಿಯೊಬ್ಬರು ಎಲ್ಲಿಂದಲೋ ಧಾವಿಸಿ ಬಂದು ಹಸುಳೆಯನ್ನು ಎದೆಗವುಚಿಗೊಂಡು ಚಿಕಿತ್ಸೆ ಕೊಡಿಸಲು ಹೊರಟೇ ಬಿಡುತ್ತಾರೆ. ತತ್‌ಕ್ಷಣ ಸ್ಪಂದಿಸಿ ಮಗುವಿನ ಪಾಲಿಗೆ ಮಹಾಮಾತೆಯಾಗುತ್ತಾರೆ.ಮೂರು ಗಂಟೆ ಕಾಲ ಅದು ಯಾರೆಂದು ಅರಿಯದ ಹಸುಳೆಗಾಗಿ ತಾಯಿಯ ಪರದಾಟ ನೋಡುಗರ ಕರುಳು ಹಿಂಡುವಂತಿತ್ತು. ಮೂರು ಗಂಟೆ ನಗರದ ನಾನಾ ಕಡೆ ಸುತ್ತಾಡಿಸಿ ಮಗುವಿನ ಸಿ.ಟಿ. ಸ್ಕ್ರ್ಯಾನ್ ಮಾಡಿಸಿಕೊಂಡು ಬರುತ್ತಾರೆ. ಹಾಲು ಕುಡಿಸಿ ಆರೈಕೆ ಮಾಡುತ್ತಾರೆ. ಮಗು ಅತ್ತಾಗ ಮಮತೆಯ ಮಡಿಲು ನೀಡುತ್ತಾರೆ. ಹೆತ್ತ ತಾಯಿ ಪ್ರಜ್ಞೆಯಿಲ್ಲದೆ ಮಲಗಿದ್ದರೆ ಪುಟ್ಟ ಕಂದಮ್ಮ ಈ ಮಹಾತಾಯಿಯ ಮಡಿಲಲ್ಲಿ ಆರೈಕೆ ಪಡೆದಿದೆ.ಕರಾವಳಿ ಅಂದರೆ ಬರೀ ಕೋಮು ಸಂಘರ್ಷದ ತಾಣ ಎನ್ನುತ್ತಿದ್ದ ಮೂರ್ಖರಿಗೆ ಮತಧರ್ಮಗಳ ಎಲ್ಲೆಯನ್ನು ಮೀರಿ ಉದಾತ್ತ ಮಾನವೀಯ ಧರ್ಮ ತೋರಿದ ಪುತ್ತೂರಿನ ಚಂದ್ರಪ್ರಭಾ ಗೌಡ ಅವರ ಈ ತುಡಿತ ಸರ್ವತ್ರ ಶ್ಲಾಘನೆಗೆ ಸಾಕ್ಷಿಯಾಗಿದೆ.ಘಟನೆ : ಅ.31ರಂದು ಶುಕ್ರವಾರ ಸಂಜೆ 4.30ಕ್ಕೆ ಪುತ್ತೂರು ಹೊರವಲಯದ ಪರ್ಪುಂಜ ಬಳಿ ರಿಕ್ಷಾ- ಕಾರು ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ನಾಲ್ಕೂವರೆ ವರ್ಷ ಪ್ರಾಯದ ಮಗು ಷಜ್ವಾ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಆಕೆಯ ತಂದೆ ರಿಕ್ಷಾ ಚಾಲಕ ಹನೀಫ್ ಬನ್ನೂರು, ಅವರ ತಾಯಿ, ಪತ್ನಿ, ಇನ್ನೊಂದು ಮಗು, ನಾದಿನಿ ಮತ್ತು ನಾದಿನಿಯ 3 ತಿಂಗಳ ಹಸುಳೆ ಗಂಭೀರ ಗಾಯಗೊಂಡಿದ್ದರು. ಷಜ್ವಾ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗುವಿನ ಅಜ್ಜಿ ಜುಲೈಕಾ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಇಬ್ಬರನ್ನು ಮಂಗಳೂರಿಗೆ ಕಳಿಸಿದ್ದರೆ, ಉಳಿದವರನ್ನು ಸಂಪ್ಯದ ಆಸ್ಪತ್ರೆಗೆ ತರಲಾಗಿತ್ತು. ಮನೆ ಸದಸ್ಯರ ಜತೆ ಕಟೀಲು ದೇಗುಲಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಾಲ್ಮರ ನಿವಾಸಿ ಚಂದ್ರಪ್ರಭಾ ಗೌಡ, ಸುದ್ದಿ ಕೇಳಿ ತಕ್ಷಣ ಕಟೀಲು ಪ್ರವಾಸ ರದ್ದು ಮಾಡಿ ಅಸ್ಪತ್ರೆಗೆ ಧಾವಿಸಿದರು. ಅಳುತ್ತಿದ್ದ 3 ತಿಂಗಳ ಹಸುಳೆ ಕಂಡು ದಿಗ್ಭ್ರಾಂತಗೊಂಡರು. ಸಿ.ಟಿ. ಸ್ಕ್ಯಾನ್ ಮಾಡಿಸುವ ಅನಿವಾರ್ಯತೆಯಿತ್ತು. ಆಸ್ಪತ್ರೆಯಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಕಂಡ ಚಂದ್ರಪ್ರಭಾ, ಮಗುವಿನ ತಾಯಿ ಐಸಿಯುನಲ್ಲಿರುವುದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾದರು.