ಚೀನಾದಿಂದ ಸೊಳ್ಳೆ ಗಾತ್ರದ ಡ್ರೋನ್: ಸೇನೆಯ ಗುಪ್ತಚರಕ್ಕೆ ನವಾಂಶ

ಬೀಜಿಂಗ್ :ಗುಪ್ತ ಸೈನಿಕ ಕಾರ್ಯಾಚರಣೆಗಳಿಗೆ ನೆರವಾಗಲೆಂದು ಸೊಳ್ಳೆ ಗಾತ್ರದ ಡ್ರೋನ್‌ಗಳನ್ನು ಚೀನಾದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಚೀನಿ ಮಾಧ್ಯಮಗಳು ವರದಿ ಮಾಡಿವೆ.
ಹುನಾನ್ ಪ್ರಾಂತ್ಯದಲ್ಲಿರುವ ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿಯ ರೋಬೋಟಿಕ್ಸ್ ವಿಭಾಗದ ವಿಜ್ಞಾನಿಗಳು ಈ ಪುಟ್ಟ ಡ್ರೋನ್ ನಿರ್ಮಿಸಿದ್ದು, 1.3 ಸೆಂ.ಮೀ.ಉದ್ದದ ಈ ಡ್ರೋನ್‌ನಲ್ಲಿ ಎಲೆಗಳನ್ನು ಹೋಲುವ 2 ಪುಟ್ಟ ರೆಕ್ಕೆಗಳು, ಕೂದಲಷ್ಟು ತೆಳುವಾದ 3 ಕಾಲುಗಳಿವೆ. ಚೀನಾದ ಮಾಧ್ಯಮದಲ್ಲಿ ಪ್ರಸಾರವಾಗಿರುವ ಈ ಡ್ರೋನ್‌ನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್ ಆಗಿದೆ.


ಸಣ್ಣ ಗಾತ್ರ ಹೊಂದಿರುವುದರಿಂದ ಸೇನಾ ಕಾರ್ಯಚರಣೆ ವೇಳೆ ಗುಪ್ತಚರ ಚಟುವಟಿಕೆ ಹಾಗೂ ಕಣ್ಗಾವಲಿಗೆ ನೆರವಾಗುವುದಲ್ಲದೆ, ನೈಸರ್ಗಿಕ ದುರಂತಗಳ ವೇಳೆ ಭಗ್ನಾವಶೇಷಗಳ ನಡುವೆ ಸಿಲುಕಿದವರ ಗುರುತಿಸಲು, ಪರಿಸರ ಸಂಬಂಧಿ ಅಧ್ಯಯನಕ್ಕೆ ಬಳಸಬಹುದು ಎನ್ನಲಾಗಿದೆ. ಆದಾಗ್ಯೂ, ಚಿಕ್ಕಗಾತ್ರದ ಡ್ರೋನ್‌ಗೆ ಶಕ್ತಿ ನೀಡುವ ಬ್ಯಾಟರಿಯೂ ಸಣ್ಣದಾ ಗಿರುವುದರಿಂದ, ಇವುಗಳಿಂದ ದೀರ್ಘ ಹಾರಾಟ ನಿರೀಕ್ಷಿಸುವಂತಿಲ್ಲ. ಬ್ಯಾಟರಿ ಜೀವಿತಾವಧಿ, ಸೆನ್ಸರ್, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಭವಿಷ್ಯದ ಸುಧಾರಣೆಗಳು ಇದರ ಸಾಮರ್ಥ್ಯ ವೃದ್ಧಿಸಬಹುದು.
