ಇಂಡೋ-ನೇಪಾಳ ಗಡಿಯಲ್ಲಿ ಮಸೀದಿ, ಮಜರ್, ಮದರಸಾ ಧ್ವಂಸ

ಲಖನೌ: ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿರುವ ಉತ್ತರ ಪ್ರದೇಶ ಸರ್ಕಾರ, ಕಳೆದ ಎರಡು ತಿಂಗಳ ಅವಧಿಯಲ್ಲಿ 130 ಅನಧಿಕೃತ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ವಿಶೇಷವಾಗಿ ರಾಜ್ಯದ ಏಳು ಜಿಲ್ಲೆಗಳನ್ನು ವ್ಯಾಪಿಸಿರುವ ಇಂಡೋ-ನೇಪಾಳ ಗಡಿಯಲ್ಲಿ 198 ಕಟ್ಟಡಗಳನ್ನು ಸೀಜ್ ಮಾಡಿದ್ದು, ಅಂತಹ 223 ಕಟ್ಟಡಗಳಿಗೆ ನೋಟಿಸ್ ನೀಡಿದೆ.

ಪಿಲಿಭಿತ್, ಶ್ರಾವಸ್ತಿ, ಬಲ್ರಾಮ್‌ಪುರ, ಬಹ್ರೈಚ್, ಲಖಿಂಪುರ ಖೇರಿ, ಸಿದ್ಧಾರ್ಥನಗರ ಮತ್ತು ಮಹಾರಾಜ್‌ಗಂಜ್‌ನಾದ್ಯಂತ ಅಕ್ರಮ ಕಟ್ಟಡಗಳನ್ನು ಗುರಿಯಾಗಿಸಿ ಧ್ವಂಸ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶ್ರಾವಸ್ತಿಯಲ್ಲಿ ಅತಿ ಹೆಚ್ಚು 149 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ.
ಭಾರತ-ನೇಪಾಳ ಗಡಿಯ 10 ಕಿಮೀ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿ, ಈದ್ಗಾ, ಮದರಸಾಗಳು ಮತ್ತು ಮಜರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶ್ರಾವಸ್ತಿಯಲ್ಲಿ ಇದುವರೆಗೆ 149 ಅಕ್ರಮ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಈ ಪೈಕಿ 140ನ್ನು ಸೀಜ್ ಮಾಡಿದ್ದು, 37 ಅನ್ನು ಧ್ವಂಸಗೊಳಿಸಲಾಗಿದೆ ಎಂದು ಶ್ರಾವಸ್ತಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ದ್ವಿವೇದಿ ತಿಳಿಸಿದ್ದಾರೆ.
ಲಖೀಂಪುರ ಖೇರಿ ಜಿಲ್ಲೆಯಲ್ಲಿ ಒಟ್ಟು 13 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದುರ್ಗಾ ಶಕ್ತಿ ನಾಗ್ಪಾಲ್ ತಿಳಿಸಿದ್ದಾರೆ. ಈ ಪೈಕಿ ಮೂರು ಕಟ್ಟಡಗಳನ್ನು ಧ್ವಂಸ ಮಾಡಲಾಗಿದ್ದು, 10 ಕಟ್ಟಡಗಳನ್ನು ಸೀಜ್ ಮಾಡಲಾಗಿದೆ ಮತ್ತು ಒಬ್ಬರಿಗೆ ನೋಟಿಸ್ ನೀಡಲಾಗಿದೆ.
ಅದೇ ರೀತಿ ಪೂರ್ವ ಯುಪಿಯ ಮಹಾರಾಜ್‌ಗಂಜ್‌ನಲ್ಲಿ, ಗುರುತಿಸಲಾದ 45 ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ 24 ಅನ್ನು ಸೀಜ್ ಮಾಡಲಾಗಿದ್ದು, 31 ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ.
