ಅಂತ್ಯಕ್ರಿಯೆಯ ವೇಳೆ ಹೆಲಿಕಾಪ್ಟರ್‌ನಿಂದ ಹಣ ಹಾಗೂ ಗುಲಾಬಿ ಮಳೆ

ವಾಷಿಂಗ್ಟನ್:ಅಮೆರಿಕದ (America) ವ್ಯಕ್ತಿಯೊಬ್ಬ ತನ್ನ ಅಂತ್ಯಕ್ರಿಯೆ ಮಧ್ಯೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದ. ಅದಕ್ಕಾಗಿ ತನ್ನ ಅಂತ್ಯಕ್ರಿಯೆ ದಿನ ಹೆಲಿಕಾಪ್ಟರ್‌ನಿಂದ ಹಣ (Money) ಮತ್ತು ಗುಲಾಬಿ (Rose) ಮಳೆಯನ್ನು ಸುರಿಸುವುದರ ಮೂಲಕ ಅಂತಿಮ ಮತ್ತು ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾನೆ.

ಜನರಿಗೆ ಸಹಾಯ ಮಾಡಲು ವಿಭಿನ್ನ ಪ್ರಯತ್ನ
ಉದ್ಯಮಿ ಮತ್ತು ವೃತ್ತಿಪರ ರೇಸ್ ಕಾರ್ ಚಾಲಕ ಡ್ಯಾರೆಲ್ ಥಾಮಸ್ ಜೂನ್ 15ರಂದು 58 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಸಾವಿನಲ್ಲೂ ಜನರಿಗೆ ಸಹಾಯ ಮಾಡಲು ಒಂದು ಮಾರ್ಗವನ್ನು ಹುಡುಕಿದ್ದರು. ಜೂನ್ 27ರಂದು, ಅವರ ಕೊನೆಯ ಆಸೆಯಂತೆ, ಅವರ ಮಕ್ಕಳು ಅಂತ್ಯಕ್ರಿಯೆಯ ವೇಳೆ ಡೆಟ್ರಾಯಿಟ್‌ನ ಈಸ್ಟ್‌ಸೈಡ್‌ನಲ್ಲಿರುವ ಗ್ರ್ಯಾಟಿಯಟ್ ಅವೆನ್ಯೂದಲ್ಲಿ ನೆರೆದಿದ್ದ ಬಡ ಜನರ ಮೇಲೆ 5,000 ಡಾಲರ್ ನಗದು ಮತ್ತು ಗುಲಾಬಿ ಸುರಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು.

‘ಇದು ಸಮುದಾಯಕ್ಕೆ ಅವರ ಪ್ರೀತಿಯ ಕೊಡುಗೆ. ಅವರು ದಾನಿಗಳಾಗಿದ್ದರು. ಇತ್ತೀಚಿನ ದಿನಗಳಲ್ಲಿ ನೀವು ಅಂತಹ ಜನರನ್ನು ಕಂಡಿರುವುದಿಲ್ಲ’ ಎಂದು ಡ್ಯಾರೆಲ್ ಥಾಮಸ್ ಸೋದರ ಸೊಸೆ ಕ್ರಿಸ್ಟಲ್ ಪೆರ್ರಿ ಹೇಳಿದ್ದಾರೆ.
ಪೊಲೀಸರಿಂದ ತನಿಖೆ
ಗುಲಾಬಿ ಸುರಿಯುತ್ತೇವೆ ಎಂಬ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತಾದರೂ, ಹಣವನ್ನು ಸಹ ಬೀಳಿಸಲಾಗುತ್ತದೆ ಎಂದು ಯಾರಿಗೂ ತಿಳಿಸಿರಲಿಲ್ಲ. ಯು.ಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಡೆಟ್ರಾಯಿಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ದೃಢಪಡಿಸಿದ್ದಾರೆ. ಆಕಾಶದಿಂದ ಹಣ ಮತ್ತು ಗುಲಾಬಿ ಬೀಳುವ ವೈರಲ್ ವೀಡಿಯೊಗಳನ್ನು ನೋಡಿ, ಸ್ಥಳೀಯರು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರನ್ನು ದಂಗಾಗಿದ್ದಾರೆ.