ಆಧುನಿಕ ಶ್ರವಣಕುಮಾರ: 100 ವರ್ಷದ ತಾಯಿಯನ್ನು ಹೆಗಲ ಮೇಲೆ ಹೊತ್ತು 220 ಕಿ.ಮೀ. ಪಂಡರಾಪುರ ಯಾತ್ರೆ

ಚಿಕ್ಕೋಡಿ: ಶತಾಯುಷಿ ತಾಯಿಯನ್ನು ಆಕೆಯ 55 ವರ್ಷದ ಮಗನೊಬ್ಬ ಹೆಗಲ ಮೇಲೆ ಹೊತ್ತು 220 ಕಿಮೀ ದೂರದ ಪಂಡರಾಪುರ ಯಾತ್ರೆಗೆ ಕರೆದೊಯ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ ಈ ಮೂಲಕ ಆಧುನಿಕ ಶ್ರವಣಕುಮಾರ (Modern Shravanakumara) ಎಂಬ ಖ್ಯಾತಿ ಪಡೆದಿದ್ದಾರೆ.

ಮಹಾರಾಷ್ಟ್ರದ ಪಂಡರಾಪುರ ವರೆಗೆ 220 ಕಿಲೋಮೀಟರ್ ದೂರ ತಮ್ಮ ತಾಯಿ ಸತ್ತೇವ್ವಾ ಲಕ್ಷ್ಮಣ ಬಾನೆ(100) ಅವರನ್ನು ಹೆಗಲ ಮೇಲೆ ಹೊತ್ತು ಒಯ್ದು ಶ್ರೀ ವಿಠ್ಠಲ ಪಾಂಡುರಂಗನ ದರ್ಶನ ಮಾಡಿಸಿರುವ ಪುತ್ರ ಸದಾಶಿವ ಲಕ್ಷ್ಮಣ ಬಾನೆ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಮಳೆಗಾಲದಲ್ಲಿ ಹವಾಮಾನ ವೈಪರೀತ್ಯಗಳ ನಡುವೆಯೂ ಕೂಡಾ ಕುಗ್ಗದೆ ತನ್ನ ತಾಯಿಯನ್ನು ಪಂಡರಪುರದ ಪಾದಯಾತ್ರೆ ಮೂಲಕ 9 ದಿನಗಳ ಕಾಲ ಪ್ರಯಾಣ ಬೆಳೆಸಿದ್ದ ಸದಾಶಿವ ಲಕ್ಷ್ಣ ಬಾನೆಗೆ ಗ್ರಾಮಸ್ಥರು ಭೇಷ್ ಎಂದಿದ್ದಾರೆ.
ಸದಾಶಿವ ಅವರು ಪಂಡರಪುರ ವಿಠ್ಠಲನ ಭಕ್ತರಾಗಿದ್ದಾರೆ. ಕಳೆದ 15 ವರ್ಷಗಳಿಂದ ಪ್ರತಿವರ್ಷ ಪಂಡರಪುರಕ್ಕೆ ಪಾದಯಾತ್ರೆ ಮಾಡುತಿದ್ದಾರೆ. ಶತಾಯುಷಿಯಾದ ತಮ್ಮ ತಾಯಿಯನ್ನು ಜೀವನದಲ್ಲಿ ಒಮ್ಮೆಯಾದರು ಪಂಡರಪುರ ದಿಂಡಿ ಪಾದಯಾತ್ರೆ ಮೂಲಕ ಹೆಗಲ ಮೇಲೆ ಹೊತ್ತುಕೊಂಡು ವಿಠ್ಠಲನ ದರ್ಶನ ಮಾಡಿಸಬೇಕೆಂಬ ಮಹದಾಶೆ ಇತ್ತು ಈಗ ಅದು ನೆರವೇರಿದೆ ಎಂದು ಸದಾಶಿವ ಅವರು ನುಡಿದಿದ್ದಾರೆ.
ಇನ್ನು ತಾಯಿ ಸತ್ತೆವ್ವಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನನ್ನ ಪುತ್ರ ಸದಾಶಿವ ಲಕ್ಷ್ಮಣ ಬಾನೆ ನನ್ನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ವಿಠ್ಠಲ ದರ್ಶನ ಮಾಡಿಸಿದ್ದಾನೆ. ವಿಠ್ಠಲನ ದರ್ಶನದಿಂದ ನನ್ನ ಜೀವನ ಪಾವನವಾಗಿದೆ. ಗ್ರಾಮಸ್ಥರೂ ಸಹ ನಮ್ಮೊಡನೆ ಜೊತೆ ಸೇರಿದ್ದರು. ಈ ಘಳಿಗೆಯು ನನ್ನ ಜೀವನದಲ್ಲಿಯೇ ಅವಿಸ್ಮರಣೀಯ. ನನ್ನ ಮಗನನ್ನೂ ಎಲ್ಲರೂ ವಿಠಲ ಚೆನ್ನಾಗಿ ಇಟ್ಟಿರಲಿ ಎಂದು ಅವರು ಹರಸಿದ್ದಾರೆ.
ಪಂಡಾರಪುರದ ಪಾಂಡುರಂಗನ ದರ್ಶನಕ್ಕೆ ಹಲವು ರಾಜ್ಯಗಳಿಂದ ಭಕ್ತರು ಪಾದಯಾತ್ರೆ ನಡೆಸುವುದು ವಾಡಿಕೆ. ಹಲವು ವರ್ಷಗಳಿಂದ ಈ ಪದ್ದತಿ ನಡೆದು ಬಂದಿದೆ. ಭಕ್ತರು ತಮ್ಮ ಊರುಗಳಿಂದ ಗುಂಪುಗುಂಪಾಗಿ ವಿವಿಧ ತಾಳ ವಾದ್ಯಗಳನ್ನು ಬಾರಿಸುತ್ತಾ , ಕುಣಿಯುತ್ತಾ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಲವು ತಿಂಗಳುಗಳ ಕಾಲ ನಡೆಯುವ ಈ ಯಾತ್ರೆಯ ಹಾದಿಯಲ್ಲಿ ಅಲ್ಲಿನ ಸ್ಥಳೀಯರು ಭಕ್ತಾದಿಗಳಿಗೆ ಅನ್ನಪಾನಾದಿಗಳ ವ್ಯವಸ್ಥೆಯನ್ನು ಮಾಡುತ್ತಾರೆ. ಮಕ್ಕಳು, ವಯೋವೃದ್ಧರು ಹಾಗೂ ಅಂಗವಿಕಲರೂ ಸಹ ಎಗ್ಗಿಲ್ಲದೇ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಪ್ರದರ್ಶಿಸುತ್ತಾರೆ.
ಮಹಾರಾಷ್ಟ್ರ ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿಯೂ ಸಹ ಅಸಂಖ್ಯಾತ ಭಕ್ತಾದಿಗಳು ಪಾಂಡುರಂಗನ ದರ್ಶನಕ್ಕೆ ತೆರಳುತ್ತಾರೆ.
ಮಹಾರಾಷ್ಟ್ರದಲ್ಲಿ ವಾರಿ ಎಂದೇ ಪ್ರಸಿದ್ದವಾಗಿರುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವವರನ್ನು ವಾರ್ಕರಿ ಎಂದು ಕರೆಯುತ್ತಾರೆ. ಹಲವರು ಸಂತ ಜ್ಞಾನೇಶ್ವರ ಹಾಗೂ ಸಂತ ತುಕಾರಾಮರ ಮೂರ್ತಿ, ಚಿತ್ರಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಒಯ್ಯುವ ಸಂಪ್ರದಾಯವೂ ಇದೆ. ಆಷಾಡ ಏಕಾದಶಿ ಅಥವಾ ಪ್ರಥಮ ಏಕಾದಶಿಯಂದು ಇಲ್ಲಿ ಲಕ್ಷಾಂತರ ಭಕ್ತರು ಸೇರಿ ಭಕ್ತಿಯಿಂದ ಪಾಂಡುರಂಗನಿಗೆ ಪೂಜೆ ಸಲ್ಲಿಸುತ್ತಾರೆ.
