ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ: ಭೂ ವಿವಾದದಲ್ಲಿ ಸುಳ್ಳು ಮಾಹಿತಿ ನೀಡಿದ ಅರ್ಜಿದಾರರಿಗೆ ₹10 ಲಕ್ಷ ದಂಡ!

ಬೆಂಗಳೂರು: ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹಿಂದೆ ಎಂಟು ಬಾರಿ ಪ್ರಕರಣ ದಾಖಲಿಸಿರುವುದನ್ನು ಮುಚ್ಚಿಟ್ಟಿದ್ದ ಐವರು ದಾವೆದಾರರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ₹10 ಲಕ್ಷ ದಂಡ ವಿಧಿಸಿದೆ. ದಂಡದ ಮೊತ್ತವನ್ನು ತಿಂಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದೂ ನಿರ್ದೇಶಿಸಿದೆ

ಗಂಗಮ್ಮ ಮತ್ತು ಇತರ ನಾಲ್ವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ 10 ಲಕ್ಷ ದಂಡ ವಿಧಿಸಿದ್ದಾರೆ. ಆ ಕುಟುಂಬದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಚಾಟಿ ಬೀಸಿದೆ.
ದೊಡ್ಡಬಸ್ತಿ ಮುಖ್ಯರಸ್ತೆಯ ಭುವನೇಶ್ವರಿ ನಗರದ ಗಂಗಮ್ಮ ಮತ್ತು ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ನಾಲ್ಕು ವಾರಗಳಲ್ಲಿ 10 ಲಕ್ಷ ರೂ. ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಲು ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಮೊದಲ ಅರ್ಜಿ 1994ರಲ್ಲಿ ಸಲ್ಲಿಕೆಯಾಗಿದೆ. ಈವರೆಗೂ ಎಂಟು ಬಾರಿ ಕಾನೂನು ಹೋರಾಟ ನಡೆದಿದೆ. ಎಲ್ಲ ಅರ್ಜಿಗಳು ವಜಾಗೊಂಡಿವೆ. ಈ ಅಂಶವನ್ನು ಕೊನೆಯ ಅರ್ಜಿಯಲ್ಲಿ ಮರೆ ಮಾಚಲಾಗಿದೆ. ಆದ್ದರಿಂದ ಅರ್ಜಿದಾರರು ತಪ್ಪಿತಸ್ಥರಾಗಿದ್ದು, ಶುದ್ಧಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ. ವಂಚನೆ, ತಪ್ಪು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಬರುವವರು ನ್ಯಾಯಾಂಗ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಂಳಕಗೊಳಿಸಿದಂತಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.
ಇಂತಹ ಆದೇಶಗಳು ಇತರರಿಗೆ ಎಚ್ಚರಿಕೆ ನೀಡುವಂತಿರಬೇಕು. ನ್ಯಾಯಾಲಯವನ್ನು ಆಟದ ಮೈದಾನದಂತೆ ಪರಿಗಣಿಸುವ ಬೇಜವಾಬ್ದಾರರಿಗೆ ದಂಡದ ಮೂಲಕ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಈ ಅರ್ಜಿ ಪುರಸ್ಕರಿಸಿದಲ್ಲಿಮತ್ತೊಮ್ಮೆ ನ್ಯಾಯಾಂಗ ಹೋರಾಟ ಮುಂದುವರಿಸಲು ಅವಕಾಶ ನೀಡಿದಂತಾಗಲಿದ್ದು, ನ್ಯಾಯಾಂಗ ಪ್ರಕ್ರಿಯೆ ದುರುಪಯೋಗಕ್ಕೆ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಅರ್ಜಿಯನ್ನು ದಂಡ ವಿಧಿಸಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ವೆಂಕಟೇಶ್ ಬೋವಿ ಮತ್ತು ಹನುಮಂತ ಬೋವಿ ಎಂಬುವವರು ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 26ರಲ್ಲಿದ್ದ ಸರಕಾರಿ ಭೂಮಿಯಲ್ಲಿಅನಧಿಕೃತವಾಗಿ ಬೇಸಾಯ ಮಾಡುತ್ತಿದ್ದರು. ಬಳಿಕ ಸಾಗುವಳಿ ಮಾಡುತ್ತಿದ್ದ ಆಧಾರದಲ್ಲಿಅರ್ಜಿದಾರರ ಹೆಸರಿಗೆ ಜಮೀನು ಮಂಜೂರು ಮಾಡಲಾಗಿತ್ತು. ಈ ಜಮೀನು ಇಬ್ಬರ ಹೆಸರಿಗೆ ವರ್ಗಾವಣೆಗೊಂಡಿದ್ದವು.
ಉದ್ದೇಶಿತ ಜಮೀನನ್ನು ಗವಿಪುರಂ ಎಕ್ಸ್‌ಟೆನ್ಶನ್ ಹೌಸ್ ಬಿಲ್ಡಿಂಗ್ ಕೋಆಪರೇಟಿವ್ ಸೊಸೈಟಿಯಿಂದ ಬಡಾವಣೆ ನಿರ್ಮಾಣಕ್ಕಾಗಿ 1986ರಲ್ಲಿಪ್ರಾಥಮಿಕ ಅಧಿಸೂಚನೆ ಮತ್ತು 1987ರಲ್ಲಿಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದರಂತೆ ಪ್ರತಿ ಎಕರೆಗೆ 65 ಸಾವಿರ ರೂ. ಮತ್ತು 15 ಸಾವಿರ ರೂ. ಬಡ್ಡಿ ಸೇರಿಸಿ ಪರಿಹಾರ ನೀಡಿತ್ತು. ಈ ಪರಿಹಾರ ಮೊತ್ತವನ್ನು ಭೂಮಾಲೀಕರ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಈ ನಡುವೆ ವೆಂಕಟೇಶ್ ಬೋವಿ ಮತ್ತು ಹನುಮಂತ ಬೋವಿ ಮೃತಪಟ್ಟಿದ್ದರು
ಅದಾದ ಬಳಿಕ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಕೋರಿ ಮೃತರ ವಾರಸುದಾರರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. 1992ರಲ್ಲಿಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ವಿಶೇಷ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಆ ಮನವಿಯಂತೆ ವಿಶೇಷ ಜಿಲ್ಲಾಧಿಕಾರಿಗಳು 1993ರಲ್ಲಿಉದ್ದೇಶಿತ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಶಿಫಾರಸು ಮಾಡಿದ್ದರು. ಜತೆಗೆ, ಅಧಿಸೂಚನೆ ಹೊರಡಿಸಲು ಸೂಚನೆ ನೀಡಿದ್ದರು. ಆದರೆ,ಆ ಶಿಫಾರಸು ಜಾರಿಯಾಗಿರಲಿಲ್ಲ. ಆನಂತರ ಭೂಸ್ವಾಧೀನ ಕೈಬಿಡುವಂತೆ 1993 ರಿಂದ 2025ರವರೆಗೂ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮೂಲ ಅನುದಾನ ಪಡೆದವರ ಕುಟುಂಬವು ಎಂಟನೇ ಬಾರಿಗೆ ಈ ನ್ಯಾಯಾಲಯದ ಮುಂದೆ ಇರುವುದರಿಂದ, ಮೇಲ್ನೋಟಕ್ಕೆ ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ತೋರುತ್ತಿದೆ, ಅರ್ಜಿಯನ್ನು ಅನುಕರಣೀಯ ವೆಚ್ಚಗಳೊಂದಿಗೆ ವಜಾಗೊಳಿಸಬೇಕು ಎಂದು ಸಹಕಾರಿ ಸಂಘದ ವಕೀಲರು ವಾದಿಸಿದರು.
