ಡ್ಯಾನ್ಸ್ ಮಾಸ್ಟರ್‌ನಿಂದ ಅಪ್ರಾಪ್ತೆಗೆ ಕಾರ್‌ನಲ್ಲೇ ಲೈಂಗಿಕ ಕಿರುಕುಳ – ಆರೋಪಿ ಬಂಧನ

ಬೆಂಗಳೂರು: ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾತನಾಡುವುದಾಗಿ ಪುಸಲಾಯಿಸಿ ಕಾರ್ಗೆ ಹತ್ತಿಸಿಕೊಂಡು ಡ್ಯಾನ್ಸ್ ಮಾಸ್ಟರ್‌ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರುವಂತಹ ಘಟನೆ ಮೇ 24ರ ಬೆಳಗ್ಗೆ ಕಾಡುಗೋಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಡ್ಯಾನ್ಸ್ ಮಾಸ್ಟರ್ ಭಾರತಿ ಕಣ್ಣನ್ (28)ನ್ನು ಬಂಧಿಸಿದ್ದು, ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ನಡೆದದ್ದೇನು?
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತೆ ಬಳಿ ಕಾರ್ ನಿಲ್ಲಿಸಿದ್ದ ಆರೋಪಿ, ನಾನು ಡ್ಯಾನ್ಸ್ ಮಾಸ್ಟರ್ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಡ್ಯಾನ್ಸ್ ಕ್ಲಾಸ್ ಬಗ್ಗೆ ತಿಳಿಸುವುದಾಗಿ ಪುಸಲಾಯಿಸಿ ಕಾರಿಗೆ ಹತ್ತಿಸಿಕೊಂಡಿದ್ದಾನೆ.
ಅಪ್ರಾಪ್ತೆ ಕಾರಿನ ಒಳಗಡೆ ಕುಳಿತ್ತಿದ್ದು, ಕಾರ್ ಲಾಕ್ ಮಾಡಿ ಸ್ವಲ್ಪ ದೂರ ಹೋಗಿದ್ದಾನೆ. ಈ ವೇಳೆ ಕಾರ್‌ನಲ್ಲೇ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಹತ್ತಿಸಿಕೊಂಡ ಸ್ಥಳಕ್ಕೆ ವಾಪಸ್ ಕರೆತಂದು ಬಿಟ್ಟಿದ್ದಾನೆ. ಈ ಘಟನೆ ಬಗ್ಗೆ ಅಪ್ರಾಪ್ತೆ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರ ದೂರು ಆಧರಿಸಿ ಭಾರತಿ ಕಣ್ಣನ್ನ್ನು ಪೊಲೀಸರು ಬಂಧಿಸಿದ್ದಾರೆ.