ಅಪ್ರಾಪ್ತ ಅತ್ಯಾಚಾರ ಪ್ರಕರಣ: ಅತ್ಯಾಚಾರಕ್ಕೊಳಗಾದ ಬಾಲಕಿ 2 ತಿಂಗಳ ಗರ್ಭಿಣಿ

ಬಾಗಲಕೋಟೆ: ಅವರಿಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದ ಅಪ್ರಾಪ್ತರು. ಇಬ್ಬರಿಗೂ ಪರಿಚಯವಿತ್ತು. ಇಬ್ಬರು ಈ ಹಿಂದೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಆಗಲೇ ಇಬ್ಬರು ಹತ್ತಿರವಾಗಿದ್ದರು. ಶಾಲೆ ಬಿಟ್ಟ ಮೇಲೆ ಅಪ್ರಾಪ್ತೆಯ ಮೇಲೆ ಅಪ್ರಾಪ್ತ ಅತ್ಯಾ8ಚಾರ ಎಸಗಿದ್ದನಂತೆ.

ಇದೀಗ ಫೋಕ್ಸೋ ಪ್ರಕರಣದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರಣ ಅತ್ಯಾ8ಚಾರ ಎಸಗಿದ್ದು ಮಾತ್ರವಲ್ಲ ಸಂತ್ರಸ್ತೆ ಈಗ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ಘಟನೆ ನಡೆದಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಅಪ್ರಾಪ್ತನೇ ಅತ್ಯಾ8ಚಾರ ಎಸಗಿದ್ದು, ಈ ಪ್ರಕರಣವು ಈಗ ಸ್ಥಳೀಯವಾಗಿ ಹಾಗೂ ಕಾನೂನು ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಮೂಲಗಳ ಪ್ರಕಾರ, ಇಳಕಲ್ ತಾಲೂಕಿನ ಕಂದಗಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಇಬ್ಬರು ಮಕ್ಕಳು ಓದುತ್ತಿದ್ದರು. ಆ ಸಂದರ್ಭದಲ್ಲಿ, ಸಂತ್ರಸ್ತೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಆರೋಪಿಯಾದ ಅಪ್ರಾಪ್ತ 8ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯಲ್ಲಿದ್ದಾಗಲೇ ಇವರಿಬ್ಬರ ಪರಿಚಯ ಬೆಳೆದಿತ್ತು.
ಇದೀಗ ಪೀಡಿತೆ 16 ವರ್ಷದವಳು ಹಾಗೂ ಆರೋಪಿಯಾದ ಬಾಲಕನ ವಯಸ್ಸು 17 ವರ್ಷ. ಘಟನೆಯ ಗಂಭೀರತೆಯ ಅಂಶವೆಂದರೆ, ಅಪ್ರಾಪ್ತೆಯ ಈಗಾಗಲೇ ಎರಡು ತಿಂಗಳ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಬೆಳವಣಿಗೆಯ ನಂತರ, ಬಾಲಕಿಯ ತಂದೆ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರು ಆಧರಿಸಿ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಪೊಕ್ಸೋ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆ ಆರಂಭಗೊಂಡಿದ್ದು, ಬಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪೊಕ್ಸೋ ಕೇಸಿನ ಸ್ವರೂಪ ಗಂಭೀರವಾದುದರಿಂದ, ಅಪ್ರಾಪ್ತ ಆರೋಪಿಯನ್ನು ಕಾನೂನು ಪ್ರಕ್ರಿಯೆಯಂತೆ ಕಿಶೋರ್ ನ್ಯಾಯ ಮಂಡಳಿಯ (Juvenile Justice Board) ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಪೀಡಿತೆಯ ಸುರಕ್ಷತೆ ಹಾಗೂ ಚಿಕಿತ್ಸೆಗಾಗಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಅಪ್ರಾಪ್ತರಲ್ಲಿ ಜಾಗೃತಿ ಕೊರತೆ, ಶಿಕ್ಷಣದ ಕೊರತೆ ಹಾಗೂ ಪೋಷಕರ ಮೇಲ್ವಿಚಾರಣೆಯ ಅಗತ್ಯತೆ ಎಂಬ ಚರ್ಚೆಗಳಿಗೆ ಕಾರಣವಾಗಿದೆ. ತಜ್ಞರ ಪ್ರಕಾರ, ಇಂತಹ ಘಟನೆಗಳನ್ನು ತಡೆಯಲು ಸಮಾಜದ ಎಲ್ಲಾ ವಲಯಗಳು ಗಂಭೀರವಾಗಿ ಯೋಚಿಸಿ ಕ್ರಮ ಕೈಗೊಳ್ಳಬೇಕಿದೆ. ಪ್ರಕರಣದ ತನಿಖೆಯನ್ನು ವೇಗವಾಗಿ ನಡೆಸಲಾಗುತ್ತಿದ್ದು, ವೈದ್ಯಕೀಯ ವರದಿ, ಸಾಕ್ಷಿಗಳ ಹೇಳಿಕೆ ಹಾಗೂ ಶಾಲಾ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಶೀಘ್ರದಲ್ಲೇ ನ್ಯಾಯಾಂಗಕ್ಕೆ ಸಂಪೂರ್ಣ ವಿವರ ಸಲ್ಲಿಸುವ ನಿರೀಕ್ಷೆ ಇದೆ.
