ರೈಲಿನಲ್ಲಿ ಸೀಟಿಗಾಗಿ ಸಣ್ಣ ಜಗಳ ವಿಕೋಪಕ್ಕೆ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಯಾಣಿಕ!

ರೈಲ್ವೆಯ ಜನರಲ್ ಬೋಗಿಯಲ್ಲಿ ಸೀಟಿಗಾಗಿ ನಡೆದ ಜಗಳವೊಂದು ವಿಕೋಪಕ್ಕೆ ತಿರುಗಿದ್ದು, ಮಹಿಳೆಯೊಬ್ಬರ ವರ್ತನೆಯಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಅವರಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ವರದಿಯ ಪ್ರಕಾರ, ಜನರಲ್ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸಣ್ಣ ವಿಷಯಕ್ಕಾಗಿ ವ್ಯಕ್ತಿಯೊಬ್ಬರ ಜೊತೆ ಗಲಾಟೆ ಆರಂಭಿಸಿ, ಅವರ ಪತ್ನಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ದಂಪತಿಯ ರೂಪ ಮತ್ತು ಕೆಲಸದ ಬಗ್ಗೆ ತುಚ್ಛವಾಗಿ ಮಾತನಾಡುತ್ತಾ, ಕೈಯಲ್ಲಿ ಚಪ್ಪಲಿ ಹಿಡಿದು ಬೆದರಿಕೆ ಹಾಕಿದ್ದಾರೆ. ಆರಂಭದಲ್ಲಿ ತಾಳ್ಮೆಯಿಂದಿದ್ದ ವ್ಯಕ್ತಿ, ತನ್ನ ಪತ್ನಿಯನ್ನು ಮಹಿಳೆ ಕೆಟ್ಟ ಭಾಷೆಯಿಂದ ನಿಂದಿಸಿದ ತಕ್ಷಣ ನಿಯಂತ್ರಣ ಕಳೆದುಕೊಂಡು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ವರ್ತನೆ ಮತ್ತು ಪುರುಷನ ಪ್ರತಿಕ್ರಿಯೆಯ ಬಗ್ಗೆ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.
