ರೀಲ್ಸ್ ಹುಚ್ಚಿಗೆ ಬಲಿಯಾದ ಅಪ್ರಾಪ್ತ ಬಾಲಕ: ಒಡಿಶಾದ ಪುರಿ ಜಿಲ್ಲೆಯಲ್ಲಿ ರೈಲು ಹಳಿ ಪಕ್ಕ ಸಾಹಸ; ವೇಗವಾಗಿ ಬಂದ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

ಒಡಿಶಾ: ಅಪ್ರಾಪ್ತ ಬಾಲಕ ರೀಲ್ಸ್ ವಿಡಿಯೋ ಹುಚ್ಚಿನಿಂದ ಅನಾಹುತ ಮೈಮೇಲೆ ಎಳೆದುಕೊಂಡಿದ್ದಾನೆ. ರೈಲು ಹಳಿ ಪಕ್ಕದಲ್ಲೇ ರೀಲ್ಸ್ ಸಾಹಸ ಮಾಡಿದ ಅಪ್ರಾಪ್ತನಿಗೆ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಒಡಿಶಾದ ಪುರಿ ಜಿಲ್ಲೆಯಲ್ಲಿ ನಡೆದಿದೆ. ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಮರಳಿ ಮನೆಯಲ್ಲಿ ಬಿಟ್ಟ ಈತ, ಬಳಿಕ ರೀಲ್ಸ್ ಮಾಡಲು ರೈಲು ಹಳಿ ಪಕ್ಕ ತೆರಳಿದ್ದಾನೆ. ಏನೂ ಅರಿಯದ ಪೋಷಕರು ಮಗನ ಕಳೆದುಕೊಂಡು ಕಣ್ಮೀರಿಡುತ್ತಿದ್ದಾರೆ.

ರೈಲಿನ ರೀಲ್ಸ್, ಅಪಾಯವೇ ಹೆಚ್ಚು
ಜನಕದೈಪುರ ರೈಲು ನಿಲ್ದಾಣದ ಬಳಿ ರೈಲ್ವೇ ಹಳಿ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ರೈಲು ವೇಗವಾಗಿ ಬಂದು ಡಿಕ್ಕಿಯಾಗಿದೆ. ಮಾಹಿತಿ ತಿಳಿದ ಬೆನ್ನಲ್ಲೇ ರೈಲ್ವೇ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ತೀವ್ರವಾಗಿ ಗಾಯಗೊಂಡ ಬಾಲಕನ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಪರಿಶೀಲಿಸಿದ ವೈದ್ಯರು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ ಬಾಲಕ
ಅಪ್ರಾಪ್ತ ಬಾಲಕ ಬೆಳಗ್ಗೆ ತಾಯಿಯನ್ನು ದಕ್ಷಿಣಕಾಳಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ದರ್ಶನ ಮುಗಿಸಿ ತಾಯಿಯನ್ನು ಮನೆಗೆ ಬಿಟ್ಟ ಬಾಲಕ ಬಳಿಕ ರೈಲು ನಿಲ್ದಾಣದ ಬಳಿಕ ಬಂದು ರೀಲ್ಸ್ ಮಾಡಲು ಮುಂದಾಗಿದ್ದಾನೆ. ಹತ್ತಿರದಿಂದ ರೈಲು ಸಾಗುವ ಅತೀ ಸಾಹಸಮಯ ದೃಶ್ಯ ಸೆರೆ ಹಿಡಿಯಲು ಮುಂದಾಗಿದ್ದಾನೆ. ಈ ಮೂಲಕ ಒಂದೇ ರೀಲ್ಸ್‌ನಲ್ಲಿ ವೈರಲ್ ಆಗುವ ಪ್ಲಾನ್ ಹಾಕಿಕೊಂಡಿದ್ದಾನೆ. ಆದರೆ ಇದು ಜೀವವನ್ನೇ ಕಸಿದುಕೊಂಡಿದೆ.
ಅಪಾಯ ಸೂಚನೆ ಉಲ್ಲಂಘಿಸಿದ ಬಾಲಕ
ರೈಲು ಹಳಿ ಬಳಿ ನಿಲ್ಲುವುದು, ದಾಟುವುದು ಅತ್ಯಂತ ಅಪಾಯಕಾರಿ. ಬಾಲಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರೀಲ್ಸ್ ಮಾಡಿದ್ದಾನೆ. ನಿಯಮ ಉಲ್ಲಂಘಿಸಿ ಸುರಕ್ಷತಾ ಎಚ್ಚರಿಕೆಗಳನ್ನು ಕಡೆಗಣಿಸಿದ್ದಾನೆ. ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ವಿಡಿಯೋ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಈ ಘಟನೆಯಲ್ಲಿ ಬಾಲಕನ ಅಜಾಗರೂಕತೆ, ಹುಚ್ಚು ಸಾಹಸವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಮಗನ ಕಳೆದುಕೊಂಡ ಪೋಷಕರು ಕಂಗಾಲು
ಅತೀವ ಬಡತನದಲ್ಲಿ ಮಗನ ಬೆಳೆಸುತ್ತಿದ್ದ ಪೋಷಕರು ಇದೀಗ ಮಗನನ್ನೇ ಕಳೆದುಕೊಂಡು ಕಂಗಾಲಾಗಿದ್ದಾರೆ. ಮಗನಿಗೆ ವಿದ್ಯಾಭ್ಯಾಸ ಕೊಡಿಸಿ ಬಡತನದಿಂದ ಮುಕ್ತವಾಗುವ ಕನಸು ಕಂಡಿದ್ದರು. ಆದರೆ ಹುಚ್ಚು ರೀಲ್ಸ್ ಆಸೆಗೆ ಬಿದ್ದ ಮಗ ಮೃತಪಟ್ಟಿದ್ದಾನೆ. ಇಷ್ಟೇ ಅಲ್ಲ ಯುವಕ ನಿಯಮಗಳನ್ನು ಉಲ್ಲಂಘಿಸಿ ಮೃತಪಟ್ಟಿರುವ ಕಾರಣ ರೈಲ್ವೇ ಇಲಾಖೆಯಿಂದ ಯಾವುದೇ ಪರಿಹಾರವೂ ಸಿಗುವುದಿಲ್ಲ. ಇದೀಗ ಪೋಷಕರಿಗೆ ಕಣ್ಣೀರು ಬಿಟ್ಟರೆ ಬೇರೆ ಜೊತೆಗಾರನಿಲ್ಲ.
ಸೂಚನೆ: ಹುಚ್ಚು ಸಾಹಸದ ರೀಲ್ಸ್ ವಿಡಿಯೋ ಅಪಾಯಕಾರಿಯಾಗಿದೆ. ಈ ಕೆಳಗೆ ನೀಡಿರುವ ವಿಡಿಯೋದಲ್ಲಿ ಅಸ್ವಸ್ಥಗೊಳಿಸುವ ದೃಶ್ಯಗಳಿವೆ. ಈ ರೀತಿಯ ಸಾಹಸಕ್ಕೆ ಕೈಹಾಕಬೇಡಿ.