ಬಾಗಲಕೋಟೆಯಲ್ಲಿ ಸಚಿವ ಬೆಂಬಲಿಗನ ದರ್ಪ: ಹೆದ್ದಾರಿಯ ಡಿವೈಡರ್ ಒಡೆದು ಹಾಕಿದ ಕಾಂಗ್ರೆಸ್ ಮುಖಂಡ!

ಬಾಗಲಕೋಟೆ: ಅಪಘಾತ ತಡೆಯಲು, ಸಂಚಾರ ಸುಗಮಗೊಳಿಸಲೆಂದು ಸರ್ಕಾರ ರಸ್ತೆಗಳ ನಡುವೆ ಡಿವೈಡರ್ ಹಾಕಿಸುತ್ತದೆ. ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ಕೋಟ್ಯಾಂತರ ಹಣ ಖರ್ಚು ಮಾಡಿ ಇಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಒಮ್ಮೊಮ್ಮೆ ಜನಪ್ರತಿನಿಧಿಗಳ ಬೆಂಬಲಿಗರೇ ಹಲವು ಬಾರಿ ತಮ್ಮ ಸ್ವಾರ್ಥಕ್ಕೆ ಸರ್ಕಾರದ ಆಸ್ತಿಗಳಿಗೆ ಹಾನಿ ಮಾಡುತ್ತಾರೆ.

ಇಲ್ಲೂ ಆಗಿದ್ದು ಅದೇ… ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಬೆಂಬಲಿಗ ಎನ್ನಲಾದವನು ತನ್ನ ಗೊಬ್ಬರದ ಅಂಗಡಿಗೆ ವಾಹನ ಹೋಗಲು ಅನುಕೂಲವಾಗಲೆಂದು ಧಾರವಾಡ-ವಿಜಯಪುರ ಹೆದ್ದಾರಿಯಲ್ಲಿನ ರಸ್ತೆ ವಿಭಜಕವನ್ನೇ ಒಡೆದು ದರ್ಪ ತೋರಿರುವ ಘಟನೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಇಂದು ನಡೆದಿದೆ.

ಸಚಿವ ಬೆಂಬಲಿಗನ ಈ ನಡೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಯನ್ನು ಮಾಡಿ ಡಿವೈಡರ್ ಮರು ನಿರ್ಮಾಣಕ್ಕೆ ಅವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡ ಕೃಷ್ಣಾ ಪರೆಡ್ಡಿ ಎಂಬುವವರು ಡ್ರಿಲ್ಲಿಂಗ್ ಯಂತ್ರವನ್ನು ಬಳಸುವ ಮೂಲಕ ಖುದ್ದು ಎದುರು ನಿಂತು ಡಿವೈಡರ್ ಅನ್ನು ತೆಗೆದುಹಾಕಿಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ವೈಡರ್ ಒಡೆದು ಹಾಕಿದ್ದಕ್ಕೆ ರಸ್ತೆ ತಡೆ ನಡೆಸಿ ಮುದ್ದಾಪುರದ ಗ್ರಾಮಸ್ಥರೂ ಹೋರಾಟ ಮಾಡಿದ್ದು, ಡಿವೈಡರ್ ಮರು ನಿರ್ಮಾಣ ಮಾಡಬೇಕು. ಡಿವೈಡರ್ ಧ್ವಂಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟುಹಿಡಿದ್ದಾರೆ.
