‘ನನ್ನ ಸಾವಿಗೆ ಸಚಿವ ಜಮೀರ್ ಅಹಮದ್ ಕಾರಣ’; ರಕ್ತದಲ್ಲಿ ಡೆತ್ನೋಟ್ ಬರೆದು ರೈತ-ವ್ಯಾಪಾರಿಯಿಂದ ಹೈಡ್ರಾಮಾ

ಚಿಕ್ಕಬಳ್ಳಾಪುರ: ರಾಜ್ಯದ ಮೆಕ್ಕೆಜೋಳದ (Corn) ವ್ಯಾಪಾರಿ ಹಾಗೂ ರೈತರಿಗೆ ಸಹಕಾರ ನೀಡುವ ಬದಲು ತೆಲಂಗಾಣದ ಮೆಕ್ಕೆಜೋಳದ ಉದ್ಯಮಿಗಳಿಗೆ ಸಪೋರ್ಟ್ ಮಾಡಿದ್ದಾರೆ ಅಂತ ಸಚಿವ ಜಮೀರ್ ಅಹಮದ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಚಿವರ ನಡೆ ಖಂಡಿಸಿ, ವ್ಯಾಪಾರಿ ರಾಮಕೃಷ್ಣ ಆಲಿಯಾಸ್ ಜೊನ್ನಲ ಕಿಟ್ಟಿ ಸಚಿವ ಜಮೀರ್ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದರು. ನನ್ನ ಸಾವಿಗೆ ಸಚಿವ ಜಮೀರ್ ಅಹಮದ್ (Zameer Ahmed Khan) ಕಾರಣ ಅಂತ ರಕ್ತದಲ್ಲಿ ಡೆತ್ನೋಟ್ ಬರೆದು ತಂದು ಹೈಡ್ರಾಮಾ ನಡೆಸಿದರು

ಏನಿದು ವಿವಾದ?
ರೈತ (Farmer) ರಾಮಕೃಷ್ಣ ಅಲಿಯಾಸ್ ಜೊನ್ನಲಕಿಟ್ಟಿ, ರಕ್ತದಲ್ಲಿ ಬರೆದ ಡೆತ್ ನೋಟ್ (Deathnote) ತಂದು ಸಚಿವ ಜಮೀರ್ ಸಮ್ಮುಖದಲ್ಲೇ ನನಗೆ ಹಣ ಕೊಡಿಸಿ, ಇಲ್ಲದಿದ್ರೆ ನಾನು ವಿಷ ಕುಡಿದು ಸಾಯ್ತೀನಿ, ನೇಣು ಹಾಕೋತಿನಿ ಅಂತ ಕಣ್ಣೀರು ಹಾಕಿದ್ದಾರೆ. ರಾಮಕೃಷ್ಣ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಬಳಿಯ ದಿಗೂರು ನಿವಾಸಿ. ದಕ್ಷಿಣ ಭಾರತದಲ್ಲೇ (South India) ಅತಿ ಹೆಚ್ಚು ಮೆಕ್ಕೆಜೋಳದ ಬ್ಯುಸಿನೆಸ್ ಮಾಡುವ ಈ ರಾಮಕೃಷ್ಣ ಕಳೆದ 4-5 ತಿಂಗಳ ಹಿಂದೆ ಹೈದರಾಬಾದ್ ನ ಅಕ್ಬರ್, ಸದ್ದಾಂ, ನಾಸೀರ್ ಅನ್ನೋ ಮೂವರು ಅಣ್ಣ ತಮ್ಮಂದಿರಿಗೆ 1 ಕೋಟಿ 89 ಲಕ್ಷ ರೂಪಾಯಿ ಮೆಕ್ಕೆಜೋಳ ಸೇಲ್ ಮಾಡಿದ್ರು. ಆದ್ರೆ ಮೂವರು ಅಣ್ಣ ತಮ್ಮಂದಿರು ರಾಮಕೃಷ್ಣಗೆ ಹಣ ನೀಡದೇ ಸತಾಯಿಸುತ್ತಿದ್ದರು. ಇದ್ರಿಂದ ನೊಂದ ರಾಮಕೃಷ್ಣ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಅಕ್ಬರ್, ಸದ್ದಾಂ, ನಾಸೀರ್ ವಿರುದ್ಧ ದೂರು ದಾಖಲಿಸಿದ್ರು. ಹೀಗಾಗಿ ಪೇರೇಸಂದ್ರ ಪಿಎಸ್‍ಐ (PSI) ಜಗದೀಶ್ ರೆಡ್ಡಿ ಅಕ್ಬರ್ ಪಾಷಾ ನನ್ನ ಬಂಧಿಸಿ ಕರೆತಂದಿದ್ರು. ಈ ವೇಳೆ ಪಿಎಸ್‌ಐಗೆ ಕರೆ ಮಾಡಿ ಮಾತನಾಡಿದ್ದ ಸಚಿವ ಜಮೀರ್ ಅಹಮದ್, ಅವರು ನಮ್ಮ ರಿಲೇಶನ್ ಇದ್ದಾರೆ ಸ್ವಲ್ಪ ಟೈಂ ಕೊಡಿ ಸೆಟಲ್ ಮಾಡಿಕೊಡ್ತಾರೆ ಅಂತ ಮಾತನಾಡಿದ್ರು. ಈಗ ಇದೇ ಮಾತು ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ

ಸಚಿವ ಜಮೀರ್ ಅಹಮದ್ ಹೇಳಿದ್ದೇನು..?
ಅಂದಹಾಗೆ ಕಳೆದ 1 ವಾರದ ಹಿಂದೆ ಈ ಆಡಿಯೋ ವೈರಲ್ ಆಗಿ ಸಚಿವ ಜಮೀರ್ ಮಾತುಗಳು ಪಿಎಸ್‍ಐ ಮೇಲೆ ಪ್ರಭಾವ ಬೀರಿರೋದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಇಂದು ಚಿಕ್ಕಬಳ್ಳಾಪುರ ನಗರದ ಷಾದಿ ಮಹಲ್‌ಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಸಚಿವ ಜಮೀರ್ ಅಹಮದ್ ಎದುರೇ ಆಗಮಿಸಿದ ದೂರುದಾರ ರೈತ ಹಾಗೂ ವ್ಯಾಪಾರಿ ರಾಮಕೃಷ್ಣ ರಕ್ತದಲ್ಲಿ ಬರೆದ ಡೆತ್ ನೋಟ್ ಹಿಡಿದು ಬಂದು, ಸರ್ ನನಗೆ ಹಣ ಕೊಡಿಸಿ ಇಲ್ಲ ಅಂದ್ರೆ ಡೆತ್ ನೋಟ್ ತಂದಿದ್ದೀನಿ, ನಾನು ವಿಷ ಕುಡಿದು ನೇಣು ಹಾಕ್ಕೊಂಡು ಸಾಯ್ತೀನಿ ಅಂತ ಸಚಿವ ಜಮೀರ್ ಅಹಮದ್ ಎದುರೇ ಕಣ್ಣೀರು ಹಾಕಿದರು. ಈ ವೇಳೆ ರಾಮಕೃಷ್ಣ ವಿರುದ್ದವೇ ಸಚಿವ ಜಮೀರ್ ಸಿಡಿಮಿಡಿಗೊಂಡರು. ನಂತರ ರೈತ-ವ್ಯಾಪಾರಿ ರಾಮಕೃಷ್ಣನನ್ನ ಸಮಾಧಾನ ಮಾಡಿ ಪೊಲೀಸರು ಕಾರ್ಯಕ್ರಮದಿಂದ ಹೊರೆಗೆ ಕರೆತಂದರು. ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಮಾತನಾಡಿದ ಜಮೀರ್ ಅಹಮದ್ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿ ನಾನು ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ನಾಳೆಯೇ ತೆಲಂಗಾಣದ ಉದ್ಯಮಿ ಅಕ್ಬರ್ ನನ್ನ ಕರೆಸಿ ಅವರಿಗೆ ಹಣ ಸೆಟ್ಲ್‍ಮೆಂಟ್ ಮಾಡಿಕೊಳ್ಳುವಂತೆ ಹೇಳುತ್ತೇನೆ ಅಂತ ಹೇಳಿ ಚಿಕ್ಕಬಳ್ಳಾಪುರದಿಂದ ಹೊರಟರು.
ಸಚಿವ ಜಮೀರ್ ಅಹಮದ್ ವಿರುದ್ಧ ರೈತರ ಆಕ್ರೋಶ!
ಇನ್ನೂ ರೈತ ರಾಮಕೃಷ್ಣಗೆ ಮೆಕ್ಕೆಜೋಳ ಮಾರಾಟ ಮಾಡಿರೋ ರೈತರು ಸಹ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶ ಹೊರಹಾಕಿದರು. ಸಚಿವರ ಮಧ್ಯ ಪ್ರವೇಶ ಮಾಡಿ ಪಿಎಸ್‍ಐಗೆ ಪೋನ್ ಮಾಡಿದ್ರಿಂದಲೇ ದುಡ್ಡು ಕೊಡ್ತೀವಿ ಅಂತ ಬಂದ ಆರೋಪಿಗಳು ದುಡ್ಡು ಕೊಡದೆ ವಾಪಸ್ ಹೋಗಿದ್ದಾರೆ. ನಮಗೆ ಈಗ ದುಡ್ಡು ಕೋಡೋವರು ಯಾರು? ಜಮೀರ್ ಅಹಮದ್ ಅವರು ಕೊಡ್ತಾರಾ ಅಂತ ಅವರ ವಿರುದ್ದವೇ ಆಕ್ರೋಶ ಹೊರಹಾಕಿದರು. ರಾಜ್ಯದ ಮೆಕ್ಕೆಜೋಳದ ವ್ಯಾಪಾರಿ-ರೈತರ ಪರ ನಿಲ್ಲುವ ಬದಲು ಸಚಿವ ಜಮೀರ್ ಅಹಮದ್ ತೆಲಂಗಾಣ ಮೂಲದ ಮೆಕ್ಕೆಜೋಳದ ಉದ್ಯಮಿಗಳು ವಂಚಕರ ಪರ ನಿಂತು ಈಗ ಇರಲಾರದೆ ಇರುವೆ ಬಿಟ್ಟುಕೊಂಡೇ ಎಂಬಂತಾಗಿದ್ದಾರೆ.