ಮಿಲ್ಕ್ಶೇಕ್ನಲ್ಲಿ ವಿಷ ಬೆರೆಸಿ ತಂದೆಯನ್ನೇ ಕೊಂದ ಪೊಲೀಸ್ ಪುತ್ರಿ; 3 ವರ್ಷದ ನಂತರ ರಹಸ್ಯ ಬಯಲು

ಚಂದ್ರಾಪುರ: ಮಾಜಿ ಪ್ರಿಯಕರನ ಸಹಾಯದೊಂದಿಗೆ ತಂದೆಗೆ ಮಿಲ್ಕ್ಶೇಕ್ ನಲ್ಲಿ ವಿಷಬೆರೆಸಿ ನೀಡಿ ಹೆಡ್ ಕಾಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಂದೆಯ ಸಾವಿಗೆ ಕಾರಣರಾದ ಆರೋಪದಲ್ಲಿ ಮಹಾರಾಷ್ಟ್ರದ ಮಹಿಳಾ ಪೊಲೀಸ್ ತರಬೇತಿಯಲ್ಲಿರುವ ಯುವತಿಯನ್ನು ಮೂರು ವರ್ಷಗಳ ಬಳಿಕ ಬಂಧಿಸಲಾಗಿದೆ.
ಮೊದಲು ಇದು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿತ್ತು. ಆದರೆ ತನಿಖಾಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ದೃಢಪಟ್ಟಿದೆ. ಈ ಸಂಬಂಧ ಪೊಲೀಸ್ ತರಬೇತಿಯಲ್ಲಿರುವ ಪುತ್ರಿ ಹಾಗೂ ಪ್ರಕರಣ ಬೆಳಕಿಗೆ ಬರಲು ಕಾರಣವಾದ ಆಕೆಯ ಮಾಜಿ ಪ್ರಿಯಕರ ಸೇರಿದಂತೆ ಇತರ ಮೂವರನ್ನು ಬಂಧಿಸಲಾಗಿದೆ. ಕರ್ತವ್ಯಕ್ಕೆ ತೆರಳುವ ಮುನ್ನ ತಂದೆಗೆ ಮಿಲ್ಕ್ಶೇಕ್ ನಲ್ಲಿ ವಿಷಬೆರೆಸಿ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿಗಳ ಆಡಳಿತ ಭವನದ ಬಳಿ 2023ರ ಮಾರ್ಚ್ 25ರಂದು ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಜಯಂತ್ ಬಲ್ಲಾವರ್ ದಿಢೀರನೇ ಕುಸಿದು ಬಿದ್ದು ಮೃತಪಟ್ಟಿದ್ದರು. ಆ ಸಮಯದಲ್ಲಿ ಅದು ಆಕಸ್ಮಿಕ ಸಾವು ಎಂದೇ ನಂಬಲಾಗಿತ್ತು. ಆದರೆ ಜಯಂತ್ ಅವರ ಪುತ್ರಿ ಆರ್ಯ ಎಂಬಾಕೆಯ ಪರಿತ್ಯಕ್ತ ಸಂಗಾತಿ ಆಶೀಶ್ ಶೆಡ್ಕಾಡೆ ಹೊಸ ಪುರಾವೆಗಳನ್ನು ಸಲ್ಲಿಸಿದ ಬಳಿಕ ಪ್ರಕರಣ ನಿರ್ಣಾಯಕ ತಿರುವು ಪಡೆದಿತ್ತು ಹಾಗೂ ರಾಮನಗರ ಪೊಲೀಸರು ಸನ್ನಿವೇಶಗಳ ಮರು ಪರಿಶೀಲನೆ ನಡೆಸಿದರು.

ಆರ್ಯ ಹಾಗೂ ಆಶೀಶ್ ನಡುವೆ 2022ರಿಂದ ಸಂಬಂಧ ಇತ್ತು: ಇದನ್ನು ಜಯಂತ್ ವಿರೋಧಿಸಿದ್ದರು. ಇದು ಮನೆಯಲ್ಲಿ ಪದೇ ಪದೇ ಜಗಳಕ್ಕೆ ಕಾರಣವಾಗಿತ್ತು. ಇಬ್ಬರ ವಿವಾಹಕ್ಕೆ ತಂದೆ ತಡೆಯಾಗಿದ್ದಾರೆ ಎಂದು ಕೋಪಗೊಂಡ ಪುತ್ರಿ ಸಂಚು ರೂಪಿಸಿ ತಂದೆಯ ಹತ್ಯೆಗೆ ಮುಂದಾದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಘಟನೆ ದಿನ ವಿಷಪೂರಿತ ಮಿಲ್ಕ್ಶೇಕ್ ಸೇವಿಸಿದ್ದ ಜಯಂತ್ ತಲೆ ಸುತ್ತುತ್ತಿದೆ ಎಂದು ಹೇಳುತ್ತಲೇ ನೆಲದ ಮೇಲೆ ಬಿದ್ದಿದ್ದರು. ಪ್ರಕರಣವನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಸಂದರ್ಭದಲ್ಲಿ ಅಟಾಪ್ಪಿ ಮತ್ತು ರಾಸಾಯನಿಕ ವಿಶ್ಲೇಷಣೆಗಳನ್ನು ಪರಾಮರ್ಶಿಸಿದಾಗ ವಿಷಪ್ರಾಶನ ಮಾಡಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ದೃಢಪಟ್ಟಿದೆ. ತಂದೆಯ ಸಾವಿನ ಬಳಿಕ ಆರ್ಯ ಅನುಕಂಪದ ಆಧಾರದಲ್ಲಿ ಪೊಲೀಸ್ ಹುದ್ದೆ ಗಿಟ್ಟಿಸಿಕೊಂಡು ತರಬೇತಿಯಲ್ಲಿದ್ದಳು.