RSS ನಾಯಕರ ಮನೆಗೆ ಮಧ್ಯರಾತ್ರಿ ಭೇಟಿ ಪ್ರಕರಣ: ಎಸ್‌ಪಿಗೆ ಹೈಕೋರ್ಟ್ ನೋಟಿಸ್

ಮಂಗಳೂರು: ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ವೇಳೆ ಆರ್ಎಸ್ಎಸ್ (RSS) ನಾಯಕರೊಬ್ಬರ ಮನೆಗೆ ಪೊಲೀಸರು ಭೇಟಿ ನೀಡಿ ಫೋಟೊ ತೆಗೆಸಿಕೊಂಡು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಎಸ್ಪಿ ಅರುಣ್ಗೆ ಕರ್ನಾಟಕ ಹೈಕೋರ್ಟ್ ನೊಟೀಸ್ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ಸೂಕ್ತ ದಾಖಲೆ ಸಲ್ಲಿಸುವಂತೆ ತಾಕೀತು ಮಾಡಿದೆ. ಕಾನೂನು ಹೊರತಾಗಿ ಆರ್ಎಸ್ಎಸ್ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ. ಆರ್ಎಸ್ಎಸ್, ಹಿಂದೂ ನಾಯಕರ ಮನೆಗೆ ಮಧ್ಯರಾತ್ರಿ ತೆರಳಿದ್ದ ಪೊಲೀಸರು
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಘಟನೆ ನಂತರ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು. ಹಿಂಸಾಚಾರ ತಡೆಗೆ ಪೊಲೀಸರು ವಿವಿಧ ಕ್ರಮ ಕೈಗೊಂಡಿದ್ದರು. ಆದರೆ, ಯಾವುದೇ ಪ್ರಕರಣದಲ್ಲಿ ಶಾಮೀಲಾಗಿರದ ಆರ್ಎಸ್ಎಸ್ ಹಾಗೂ ಹಿಂದೂ ಮುಖಂಡರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಫೋಟೊ ತೆಗೆಸಿದ್ದರು.


ಪೊಲೀಸ್ ರಾಜ್ಯವಾಗುತ್ತಿದೆಯಾ ಎಂದು ಪ್ರಶ್ನಿಸಿದ್ದ ಹಿಂದೂ ನಾಯಕರು
ಪೊಲೀಸರ ಈ ನಡೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕರ್ನಾಟಕವು ಪೊಲೀಸ್ ರಾಜ್ಯವಾಗುವತ್ತ ಸಾಗುತ್ತಿದೆಯಾ ಎಂದು ಹಿಂದೂ ನಾಯಕರು ಪ್ರಶ್ನಿಸಿದ್ದರು. ಈ ವಿಚಾರವಾಗಿ ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 1 ರಂದು ಯು.ಜಿ. ರಾಧಾ ಅವರ ಉಪ್ಪಿನಂಗಡಿ ಮನೆಗೆ ರಾತ್ರಿ ಬಂದಿದ್ದ ಪೊಲೀಸರು ಫೋಟೊ ತೆಗೆದು ಅಪ್‌ಲೋಡ್ ಮಾಡಿದ್ದರು. ನಮಗೆ ಹಿರಿಯ ಅಧಿಕಾರಿಗಳ ಆದೇಶವಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ದಾಖಲೆ ತೋರಿಸಿರಲಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಯು.ಜಿ. ರಾಧಾ ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದು, ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಗೆ ನೋಟಿಸ್ ನೀಡಿದೆ. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು.
ಯು.ಜಿ.ರಾಧಾ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಜಿಲ್ಲಾ ಎಸ್‌ಪಿಗೆ ನೋಟಿಸ್ ಜಾರಿ ಮಾಡಿದೆ. ಬೇರೆ ಬೇರೆ ದೂರುಗಳ ಆಧಾರದಲ್ಲಿ ನೊಟೀಸ್ ನೀಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ತನಿಖೆ ಮಾಡುವವರಿಗೆ ಪೊಲೀಸ್ ಕಮಿಷನರ್ ಎಚ್ಚರಿಕೆ
ಅಪರಾಧ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾ ಬಿಟ್ಟಿ ಗೀಚಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಹೋರಿಸುವವರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಕೆಲವರು ಅಪರಾಧ ಪ್ರಕರಣಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರೇ ತನಿಖೆ ಮಾಡುತ್ತಿದ್ದಾರೆ. ಯಾವ ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು ಬಿಡಬೇಕು ಎಂದು ಅವರೇ ತೀರ್ಮಾನಿಸುತ್ತಿದ್ದಾರೆ. ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ಮಾಡುತ್ತಾರೆ. ಯಾರೇ ಆರೋಪಿತರು ಸಿಕ್ಕಿದರೂ ಬಂಧಿಸುತ್ತಾರೆ. ಯಾರ ವಿರುದ್ದ ಸಾಕ್ಷ್ಯ ಸಿಗಲ್ಲವೋ ಅವರನ್ನ ಬಂಧಿಸಲು ಸಾಧ್ಯವಿಲ್ಲ. ನಿಮ್ಮ ಬಳಿ ಸಾಕ್ಷ್ಯ ಇದ್ರೆ ಪೊಲೀಸ್ ಸ್ಟೇಷನ್ಗೆ ಬನ್ನಿ ಪರಿಗಣಿಸುತ್ತೇವೆ. ನಿರಾಪರಾಧಿಗಳ ಬಂಧನದ ವಿರುದ್ಧ ಸಾಕ್ಷಿ ಇದ್ದರೂ ತನ್ನಿ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಇನ್ವೆಸ್ಟಿಗೇಷನ್, ಟ್ರಯಲ್ ಮಾಡೋದು ಒಂದು ಅಪರಾಧ. ಹಾಗೆ ಮಾಡಿದರೆ ಅಂಥವರ ವಿರುದ್ಧವೂ ಪ್ರಕರಣ ದಾಖಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಪೊಲೀಸರಿಂದ ನೋಟಿಸ್
ಚಿಂತಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. ಉಡುಪಿಯ ಕುಂದಾಪುರದಲ್ಲಿ ಜೂನ್ 20, 21, 22 ರಂದು ನಡೆಯಲಿರುವ ‘‘ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’’ ಉಪನ್ಯಾಸ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರುವ ಕುಂದಾಪುರ, ಆಯೋಜಕರಿಗೆ ಷರತ್ತು ವಿಧಿಸಿದ್ದಾರೆ. ಪೊಲೀಸರ ನಡೆಗೆ ಚಿಂತಕ ಸೂಲಿಬೆಲೆ ಸಾಮಾಜಿಕ ಜಾಲತಾಣ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ಅಘೋಷಿತ ಗಡೀಪಾರು ಮಾಡಿಸುವ ಪ್ರಯತ್ನ ಎಂದು ಅವರು ಆರೋಪಿಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಎನ್ಎಸ್ಯುಐ ಪೊಲೀಸರಿಗೆ ಮನವಿ ಮಾಡಿತ್ತು. ಸೂಲಿಬೆಲೆ ಸೌಹಾರ್ದತೆ ಕೆಡಿಸುವ ದ್ವೇಷ ಭಾಷಣ ನಡೆಸುತ್ತಾರೆ ಎಂದು ಎನ್ಎಸ್ಯುಐ ಆರೋಪ ಮಾಡಿತ್ತು. ಈ ಕಾರಣಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಯೋಜನೆಯಂತೆ ಕಾರ್ಯಕ್ರಮ ನಡೆಸುತ್ತೇವೆ ಎಂದು ಕಾರ್ಯಕ್ರಮದ ಆಯೋಜಕ ನಿರಂಜನ್ ಶೆಟ್ಟಿ ಹೇಳಿದ್ದಾರೆ.