ಸಾಲ ವಸೂಲಿಗೆ ಮಗುವನ್ನು ಎಳೆದುತಂದಿದ್ದ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಬಂಧನ

ಮಳವಳ್ಳಿ: ಸಾಲಗಾರನ 7 ವರ್ಷದ ಮಗಳನ್ನು ಕರೆದೊಯ್ದಿದ್ದ ಪ್ರಕರಣದಲ್ಲಿ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿಲ್ಕಲ್ ಪುರದ ನಿವಾಸಿ, ತಿ.ನರಸೀಪುರ ಬಜಾಜ್ ಪಿನ್ ಸರ್ವ್ ಮೈಕ್ರೋ ಫೈನಾನ್ಸ್ ಕಂಪನಿಯ ಸೆಂಟರ್ ಮ್ಯಾನೇಜರ್ ಪಿ.ಅಜಿತ್ (32) ಎಂಬುವವರನ್ನು ತಾಲ್ಲೂಕಿನ ಬೆಳಕವಾಡಿ ಪೊಲೀಸರು ಸೋಮವಾರ ಬಂಧಿಸಿದರು.

ತಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿಯ ನವೀನ ಎಂಬುವವರು, ತಾಯಿ ಮಂಗಳಮ್ಮ ಹೆಸರಿನಲ್ಲಿ ಆಟೊ ಖರೀದಿಗೆ ಸಂಸ್ಥೆಯಿಂದ ₹40 ಸಾವಿರ ಸಾಲ ಪಡೆದಿದ್ದರು. ಮೇ ತಿಂಗಳ ಕಂತು ಕಟ್ಟಲು ತಡವಾಗಿತ್ತು. ಜೂನ್ 16ರಂದು ನವೀನ, ಪತ್ನಿ ಮತ್ತು ಮಗಳೊಂದಿಗೆ ತಾಲ್ಲೂಕಿನ ಪೂರಿಗಾಲಿಯ ಸಂಬಂಧಿಕರ ಮನೆಗೆ ಬಂದಿದ್ದರು.

ಅಲ್ಲಿಗೆ ತೆರಳಿದ್ದ ಆರೋಪಿಯು ನವೀನ ಅವರ ಮಗಳು ಹಾಗೂ ಪಕ್ಕದ ಮನೆಯ ಬಾಲಕನನ್ನು, ನವೀನ್ ಇದ್ದ ಸ್ಥಳ ತೋರಿಸುವಂತೆ ಬಲವಂತವಾಗಿ ಕರೆದೊಯ್ದಿದ್ದರು. ನಂತರ ವಾಪಸ್ ಕರೆತಂದು ಬಿಟ್ಟಿದ್ದರು. ಈ ಸಂಬಂಧ ನವೀನ ಪೊಲೀಸರಿಗೆ ದೂರು ನೀಡಿದ್ದರು.
ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಬಣ್ಣಾರಿ ಅಮ್ಮ ದೇವಸ್ಥಾನದ ಬಳಿ ಬಂಧಿಸಿ, ಕೃತ್ಯ ದಿನ ಬಳಸಿದ್ದ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
