ಮೆಟ್ರೋ ಪ್ರಯಾಣ ದರ ಏರಿಕೆ: ಶೇ. 51.5 ರಷ್ಟು ಹೆಚ್ಚಳಕ್ಕೆ ದರ ನಿಗದಿ ಸಮಿತಿ ಶಿಫಾರಸು

ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯಾದ ಏಳು ತಿಂಗಳ ಬಳಿಕ ಬಿಎಂಆರ್‌ಸಿಎಲ್ ತನ್ನ ವೆಬ್‌ಸೈಟ್‌ನಲ್ಲಿ ದರ ನಿಗದಿ ಸಮಿತಿ ನೀಡಿರುವ ವರದಿಯನ್ನು ಪ್ರಕಟಿಸಿದೆ.

ಬಿಎಂಆರ್‌ಸಿಎಲ್ ಶೇ 105.5ರಷ್ಟು ದರ ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದು, ಶೇ 51.55ರಷ್ಟು ಹೆಚ್ಚಳ ಮಾಡಲು ದರ ನಿಗದಿ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸಮಿತಿ ಶಿಫಾರಸ್ಸು ಬದಿಗೊತ್ತಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಶೇ. 71 ರಷ್ಟು ಬೆಲೆ ಹೆಚ್ಚಿಸಿದೆ ಎಂಬುದು ಬಹಿರಂಗವಾಗಿದೆ.
ಸುಮಾರು ಏಳು ತಿಂಗಳುಗಳ ಕಾಲ ನಂತರ BMRCL ಅಂತಿಮವಾಗಿ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಿದೆ. ಪ್ರಯಾಣಿಕರು, ಚುನಾಯಿತ ಪ್ರತಿನಿಧಿಗಳು ಮತ್ತು RTI ಅರ್ಜಿದಾರರಿಂದ ನಿರಂತರ ಒತ್ತಡದ ನಂತರ ವರದಿ ಬಿಡುಗಡೆ ಮಾಡಲಾಯಿತು. ಫೆಬ್ರವರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು.
ದರ ನಿಗದಿ ಸಮಿತಿ ಶಿಫಾರಸುಗಳಿಗೆ ಅನುಗುಣವಾಗಿ ಪರಿಷ್ಕರಣೆಯಾಗಿದೆ ಎಂದು BMRCL ಹೇಳಿತ್ತು, ಆದರೆ ವರದಿಯನ್ನು ಇಲ್ಲಿಯವರೆಗೆ ಸಾರ್ವಜನಿಕರ ಗಮನಕ್ಕೆ ತರಲಾಗಿಲ್ಲ. ಸಮಿತಿಯು 7.5 ವರ್ಷಗಳಲ್ಲಿ ಶೇ. 51.5 ದರ ಹೆಚ್ಚಳವನ್ನು ಪ್ರಸ್ತಾಪಿಸಿತ್ತು, ಸುಮಾರು ಶೇ. 6.87ರಷ್ಟು ವಾರ್ಷಿಕವಾಗಿ ಏರಿಕೆ ಮಾಡಿದೆ. ಸಿಬ್ಬಂದಿ ವೆಚ್ಚಗಳು (ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಸಂಬಂಧಿಸಿದೆ), ಇಂಧನ ಶುಲ್ಕಗಳು ಮತ್ತು ನಿರ್ವಹಣಾ ವೆಚ್ಚಗಳ ಆಧಾರದ ಮೇಲೆ ವಾರ್ಷಿಕವಾಗಿ ದರಗಳನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸುವ ಪಾರದರ್ಶಕ, ಕಾರ್ಯವಿಧಾನವನ್ನು ಶಿಫಾರಸು ಮಾಡಿತು.
ಇದಕ್ಕೆ ವ್ಯತಿರಿಕ್ತವಾಗಿ, ಬಿಎಂಆರ್‌ಸಿಎಲ್ ಆರಂಭದಲ್ಲಿ ಶೇ 105.5ರಷ್ಟು ದರ ಏರಿಕೆ ಮಾಡುವಂತೆ ಕೋರಿತ್ತು, ಆದರೆ ಅದನ್ನು ಎಫ್‌ಎಫ್‌ಸಿ ಅಸಮಂಜಸವೆಂದು ತಿರಸ್ಕರಿಸಿತು. ಅಂತಿಮವಾಗಿ ನಿಗಮವು ಶೇ, 71 ರಷ್ಚು ಹೆಚ್ಚಿಸಿತು. ಇನ್ನು ಪ್ರತಿ ವರ್ಷ ದರ ಏರಿಕೆ ಮಾಡಲು ಬಿಎಂಆರ್‌ಸಿಎಲ್ ನಿರ್ಧಾರ ಮಾಡಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಶೇಕಡಾ 5ರಷ್ಟು ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ.
ದರ ಹೆಚ್ಚಳಕ್ಕಾಗಿ ಸಮಿತಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರವನ್ನು ಬಿಎಂಆರ್‌ಸಿಎಲ್ ಕೋರಿತ್ತು. ಅದರಂತೆ ರಾಜ್ಯ ಮೂಲಸೌಕರ್ಯ ಇಲಾಖೆಯು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರ ಸರ್ಕಾರವು ದರ ನಿಗದಿ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ಸಾರ್ವಜನಿಕರಿಂದ, ಬಿಎಂಆರ್‌ಸಿಎಲ್ ಅಧಿಕಾರಿಗಳಿಂದ, ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು.
ಕನಿಷ್ಠದರ 21 ರೂ ಹಾಗೂ ಗರಿಷ್ಠ ದರ ₹123ಕ್ಕೆ ಏರಿಸಬೇಕು ಎಂದು ತಿಳಿಸಿತ್ತು. ದೇಶದ ವಿವಿಧ ಮೆಟ್ರೊಗಳಲ್ಲಿ ಇರುವ ದರ, ವಿದೇಶಗಳಲ್ಲಿ ಇರುವ ದರ ಪರಿಷ್ಕರಣೆ ವ್ಯವಸ್ಥೆ ಎಲ್ಲವನ್ನೂ ಅಧ್ಯಯನ ನಡೆಸಿದ ದರ ನಿಗದಿ ಸಮಿತಿಯು 12 ಸ್ಲ್ಯಾಬ್‌ಗಳ ಬದಲು 10 ಸ್ಲ್ಯಾಬ್‌ಗಳನ್ನು ಮಾಡಿತ್ತು. ಅಲ್ಲದೇ ಕನಿಷ್ಠ ದರವನ್ನು 10 ರು. ಇರುವುದನ್ನು ಹಾಗೇ ಉಳಿಸಿಕೊಂಡು ಗರಿಷ್ಠ ದರವನ್ನು ₹ 90ಕ್ಕೆ ನಿಗದಿ ಮಾಡಿತ್ತು.
ಶುಲ್ಕ ಏರಿಕೆಯ ವಿರುದ್ಧ ಪ್ರತಿಭಟಿಸಿದ ಸಂಸದ ತೇಜಸ್ವಿ ಸೂರ್ಯ ದರ ಏರಿಕೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮೆಟ್ಟಿಲೇರಿದ್ದರು. ಹೈಕೋರ್ಟ್ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸುವ ಒಂದು ದಿನ ಮೊದಲು ಹಾಗೂ ದರ ಏರಿಕೆಯ ಏಳು ತಿಂಗಳ ನಂತರ, ಬಿಎಂಆರ್‌ಸಿಎಲ್ ತನ್ನ ವೆಬ್‌ಸೈಟ್‌ನಲ್ಲಿ ಎಫ್‌ಎಫ್‌ಸಿ ವರದಿಯನ್ನು ಪ್ರಕಟಿಸಿದೆ.
