ಬ್ಯಾಂಕುಗಳ ವಿಲೀನ: ಕರ್ನಾಟಕಕ್ಕೆ ಲಕ್ಷ ಕೋಟಿ ವ್ಯವಹಾರದ ರಾಷ್ಟ್ರದ ಎರಡನೇ ಅತಿದೊಡ್ಡ ಆರ್ಆರ್ಬಿ

ಭಾರತದ ಗ್ರಾಮೀಣ ಭಾಗದ ಉಸಿರಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ವಿವಿಧ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿದೆ. 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 26 ಆರ್ಆರ್ಬಿಗಳ ವಿಲೀನ ಪೂರ್ಣಗೊಂಡಿದೆ.

ಇದರೊಂದಿಗೆ ದೇಶದ 26 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರ್ಆರ್ಬಿಗಳ ಸಂಖ್ಯೆ 28ಕ್ಕೆ ಇಳಿದಿದೆ. ಇವತ್ತು, ಮೇ 1ರಿಂದ ಹೊಸ ಆರ್ಆರ್ಬಿಗಳು ಚಾಲನೆಗೆ ಬರುತ್ತಿವೆ. ಕೇಂದ್ರದ ಹಣಕಾಸು ಸೇವಾ ಇಲಾಖೆ ತನ್ನ ಎಕ್ಸ್ ಪೋಸ್ಟ್ವೊಂದರಲ್ಲಿ ಗ್ರಾಮೀಣ ಬ್ಯಾಂಕುಗಳ ವಿಲೀನ ಚಾರಿಗೆ ಬಂದಿರುವುದನ್ನು ತಿಳಿದಿದೆ.
’11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 26 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಇವತ್ತು ಚಾಲನೆಗೆ ಬರುತ್ತಿದೆ. ಪ್ರಬಲ ಗ್ರಾಮೀಣ ಬ್ಯಾಂಕು, ಉತ್ತಮ ಆಡಳಿತ, ಸುಧಾರಿತ ಸಾಲ, ಹಣಕಾಸು ಒಳಗೊಳ್ಳುವಿಕೆಗೆ ಇದು ಮುಖ್ಯ ಹೆಜ್ಜೆಯಾಗಿದೆ’ ಎಂದು ಫೈನಾನ್ಷಿಯಲ್ ಸರ್ವಿಸ್ ಡಿಪಾರ್ಟ್ಮೆಂಟ್ ಹೇಳಿದೆ.
ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್ ಎನ್ನುವ ಸರ್ಕಾರದ ನೀತಿಗೆ ಅನುಗುಣವಾಗಿ ವಿವಿಧ ರೀಜನಲ್ ರೂರಲ್ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ.
ಕರ್ನಾಟಕದಲ್ಲಿ ಹೊಸ ಗ್ರಾಮೀಣ ಬ್ಯಾಂಕು; ಇದು ದೇಶದ ಎರಡನೇ ಅತಿದೊಡ್ಡ ರೂರಲ್ ಬ್ಯಾಂಕು
ಕರ್ನಾಟಕದಲ್ಲಿ ಈ ಮುಂಚೆ ಇದ್ದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು (ಕೆವಿಜಿಬಿ) ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕು (ಕೆಜಿಬಿ) ಇವೆರಡನ್ನೂ ವಿಲೀನಗೊಳಿಸಿ ಏಕೀಕೃತ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿರ್ಮಿಸಲಾಗಿದೆ. ಕೆನರಾ ಬ್ಯಾಂಕು ಇದರ ಪ್ರಾಯೋಜಕವಾಗಿದ್ದು, ಬಳ್ಳಾರಿಯಲ್ಲಿ ಮುಖ್ಯಕಚೇರಿ ಇರುತ್ತದೆ. ಎಲ್ಲಾ ಜಿಲ್ಲೆಗಳಲ್ಲೂ ಈ ಬ್ಯಾಂಕ್ನ ಶಾಖೆಗಳಿವೆ.
1975ರಲ್ಲಿ ಕರ್ನಾಟಕದಲ್ಲಿ 13 ಗ್ರಾಮೀಣ ಬ್ಯಾಂಕುಗಳಿದ್ದುವು. ಈ ಕ್ಷೇತ್ರವನ್ನು ಬಲಪಡಿಸಲು ವಿವಿಧ ಕೇಂದ್ರ ಸರ್ಕಾರಗಳು ಹಂತ ಹಂತವಾಗಿ ವಿಲೀನ ಪ್ರಕ್ರಿಯೆ ಮಾಡುತ್ತಾ ಬಂದವು. ಅಂತಿಮವಾಗಿ ಕರ್ನಾಟಕದಲ್ಲಿ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ ಎರಡಕ್ಕೆ ಇಳಿಯಿತು.
ಧಾರವಾಡದಲ್ಲಿ ಪ್ರಧಾನ ಕಚೇರಿ ಇದ್ದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು 9 ಜಿಲ್ಲೆಗಳಲ್ಲಿ 629 ಶಾಖೆ ಹೊಂದಿತ್ತು. ಅದರ ಬ್ಯುಸಿನೆಸ್ ಟರ್ನೋವರ್ 38,714 ಕೋಟಿ ರೂ ಇತ್ತು.
ಇನ್ನು, ಕರ್ನಾಟಕ ಗ್ರಾಮೀಣ ಬ್ಯಾಂಕು ಬಳ್ಳಾರಿಯಲ್ಲಿ ಮುಖ್ಯ ಕಚೇರಿ ಇದ್ದು, 22 ಜಿಲ್ಲೆಗಳಲ್ಲಿ 1,122 ಶಾಖೆಗಳನ್ನು ಹೊಂದಿ, 66,137 ಕೋಟಿ ರೂ ವ್ಯವಹಾರ ಕಾಣುತ್ತಿತ್ತು. ಈಗ ಇವೆರಡೂ ಬ್ಯಾಂಕುಗಳು ವಿಲೀನಗೊಂಡ ಬಳಿಕ ದೇಶದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕು ಕರ್ನಾಟಕಕ್ಕೆ ಬಂದಂತಾಗಿದೆ.
ಲಕ್ಷ ಕೋಟಿ ರೂ ಟರ್ನೋವರ್ ಇರುವ ಏಕೀಕೃತ ಬ್ಯಾಂಕು
ಏಕೀಕೃತ ಕರ್ನಾಟಕ ಗ್ರಾಮೀಣ ಬ್ಯಾಂಕು ಎಲ್ಲಾ ಜಿಲ್ಲೆಗಳಲ್ಲಿ ಸೇರಿ 1,751 ಶಾಖೆಗಳನ್ನು ಹೊಂದಿದೆ. ಅದರ ಒಟ್ಟು ವ್ಯವಹಾರ 1,04,851 ಕೋಟಿ ರೂನಷ್ಟಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಕೇಂದ್ರ ಸರ್ಕಾರದ ಪಾಲು ಶೇ. 50ರಷ್ಟಿರುತ್ತದೆ. ರಾಜ್ಯ ಸರ್ಕಾರ ಶೇ. 15, ಹಾಗೂ ಪ್ರಾಯೋಜಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಶೇ. 35 ಪಾಲು ಹೊಂದಿರುತ್ತದೆ.
ಯಾವ್ಯಾವ ರಾಜ್ಯಗಳ ಗ್ರಾಮೀಣ ಬ್ಯಾಂಕುಗಳು ವಿಲೀನಗೊಂಡಿವೆ..?
ಕರ್ನಾಟಕ ಅಲ್ಲದೆ, ಆಂಧ್ರ, ಉತ್ತಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದ ಗ್ರಾಮೀಣ ಬ್ಯಾಂಕುಗಳು ವಿಲೀನಗೊಳ್ಳುತ್ತಿವೆ. ಇದರೊಂದಿಗೆ 43 ಇದ್ದ ಬ್ಯಾಂಕುಗಳ ಸಂಖ್ಯೆ 28ಕ್ಕೆ ಇಳಿಯುತ್ತದೆ.