ಪತ್ನಿಯ ದೌರ್ಜನ್ಯಕ್ಕೆ ಬ್ರೇಕ್ ನೀಡಲು, ಪ್ರತ್ಯೇಕ ಆಯೋಗಕ್ಕೆ ಬೇಡಿಕೆ ಇಡುತ್ತಿದ್ದಾರೆ ಪುರುಷರು

ನವದೆಹಲಿ:ದೇಶದಲ್ಲಿ ಪತಿ – ಪತ್ನಿ ಸಂಬಂಧಕ್ಕೆ ಕಳಂಕ ತರುವ ಅನೇಕ ಘಟನೆಗಳು ಬೆಳಕಿಗೆ ಬರ್ತಿದೆ. ಕೌಟುಂಬಿಕ ದೌರ್ಜನ್ಯ ಎಂದಾಗ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗ್ತಿದ್ದಾರೆ ಎಂದೇ ಈ ಹಿಂದೆ ನಂಬಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಕ್ಕೆ ಒಳಗಾಗ್ತಿರುವ ಪುರುಷರ ಸಂಖ್ಯೆ ಏರಿಕೆಯಾಗ್ತಿದೆ. ಒಂದೇ ವರ್ಷದಲ್ಲಿ ಮಧ್ಯಪ್ರದೇಶದಲ್ಲಿ 22 ಸಾವಿರಕ್ಕೂ ಹೆಚ್ಚು ಜನರು ಕೌಟುಂಬಿಕ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. ಹೆಂಡತಿಯರಿಂದ ಕಿರುಕುಳಕ್ಕೊಳಗಾಗುತ್ತಿರುವ ಪುರುಷರು ಈಗ ಪುರುಷರ ಆಯೋಗ ರಚನೆಗೆ ಆಗ್ರಹಿಸಿದ್ದಾರೆ.

ಕಿರುಕುಳಕ್ಕೊಳಗಾದ ಪುರುಷರಿಗೆ ಸಹಾಯ ಮಾಡಲು ವಾಚ್ ಲೀಗ್ ಎಂಬ ಸಂಘಟನೆ ಶುರುವಾಗಿದೆ. ಅದ್ರ ಸಂಚಾಲಕಿ ಚಂದನಾ ಅರೋರಾ, ಪತ್ನಿಯಿಂದ ಕಿರುಕುಳಕ್ಕೆ ಒಳಗಾಗ್ತಿರುವ ಘಟನೆಯನ್ನು ವೈವಾಹಿಕ ಭಯೋತ್ಪಾದನೆ ಎಂದು ಕರೆದಿದ್ದಾರೆ. ಮಧ್ಯಪ್ರದೇಶದಲ್ಲಿ ಅನೇಕ ಮಹಿಳೆಯರು, ಕಾನೂನನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಪುರುಷರ ಮೇಲೆ ಸುಳ್ಳು ಆರೋಪ ಹೊರಿಸಿ ಅವರಿಗೆ ತೊಂದ್ರೆ ನೀಡ್ತಿದ್ದಾರೆ. ಕಾನೂನಿನ ಹೆಸರಿನಲ್ಲಿ ಅವರಿಗೆ ಹಿಂಸೆ ನೀಡ್ತಿದ್ದಾರೆ.
ಉಮೇಶ್ ಎಂಬಾತ ತನ್ನ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ. ಭೋಪಾಲ್ನ ಅಶೋಕ ಗಾರ್ಡನ್ನಲ್ಲಿ ವಾಸಿಸುತ್ತಿದ್ದ ಉಮೇಶ್ ಸಲೋನಿಯಾ 2001 ರಲ್ಲಿ ಬಾಲಘಾಟ್ನ ಹುಡುಗಿಯನ್ನು ಮದುವೆಯಾಗಿದ್ರು. ಮದುವೆ ನಂತ್ರವೂ ಉಮೇಶ್ ಪತ್ನಿ ಓದು ಮುಂದುವರೆಸಿದ್ದಳು. ಎಂ.ಎಸ್ಸಿ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಓದು ಮುಗಿದ ನಂತ್ರ ಸುಮಾರು 8 ತಿಂಗಳು ನಾಪತ್ತೆಯಾಗಿದ್ಲು. ಪತ್ನಿಯನ್ನು ಹುಡುಕಿ ಸುಸ್ತಾಗಿದ್ದ ಉಮೇಶ್, ಬಾಲಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ನಂತ್ರ ಪ್ರತ್ಯಕ್ಷವಾಗಿದ್ದ ಪತ್ನಿ, ಉಮೇಶ್ ವಿರುದ್ಧವೇ ದೂರು ದಾಖಲಿಸಿದ್ದಳು. ವರದಕ್ಷಿಣೆ ಮತ್ತು ಕಿರುಕುಳದ ಆರೋಪ ಹೊರಿಸಿದ್ದಳು. ಅಷ್ಟೇ ಅಲ್ಲ ಉಮೇಶ್ ಪತ್ನಿ ಈಗ 10 ಲಕ್ಷ ರೂಪಾಯಿ ಮತ್ತು ಆಭರಣವನ್ನು ವಿಚ್ಛೇದನ ಮೊತ್ತವಾಗಿ ಕೇಳ್ತಿದ್ದಾಳೆ. ಮಾಧ್ಯಮದ ಮುಂದೆ ಕಣ್ಣಿರು ಹಾಕಿದ ಉಮೇಶ್, ನ್ಯಾಯ ಸಿಗದೆ ಹೋದ್ರೆ ಅತುಲ್ ಹಾಗೆ ಆತ್ಮಹತ್ಯೆಯೊಂದೇ ನನಗಿರುವ ದಾರಿ ಎಂದಿದ್ದಾರೆ. ಬರೀ ಉಮೇಶ್ ಮಾತ್ರವಲ್ಲ ಅನೇಕರು ಇಂಥದ್ದೇ ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅಫ್ತಾಬ್ ಎಂಬುವವರಿಗೆ ಹುಟ್ಟಿನಿಂದಲೇ ಕಣ್ಣು ಕಾಣೋದಿಲ್ಲ. ಅವರು 2017 ರಲ್ಲಿ ಮದುವೆ ಆಗಿದ್ರು. ಸರ್ಕಾರಿ ಕೆಲಸ ಸಿಕ್ಕಾಗ ಪತ್ನಿ, ಕುಟುಂಬಸ್ಥರಿಂದ ಬೇರೆ ಆಗುವಂತೆ ಒತ್ತಡ ಹೇರಿದ್ದಳು. ನಂತ್ರ ಗಲಾಟೆ ಮಾಡಿ, ಪತಿ ಬಿಟ್ಟು ತವರು ಸೇರಿದ್ಲು. ಆ ನಂತ್ರ ಅಫ್ತಾಬ್ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ಲು. ಪ್ರಕರಣ ಅಲಹಾಬಾದ್ ಹೈಕೋರ್ಟ್ನಲ್ಲಿ ಈಗ್ಲೂ ವಿಚಾರಣೆಯಲ್ಲಿದೆ. ಅಫ್ತಾಬ್ ಹೆಂಡತಿ ವಿಚ್ಛೇದನಕ್ಕೆ 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ.
ಇಂಥ ಪ್ರಕರಣ ಹೆಚ್ಚಾಗ್ತಿದ್ದಂತೆ ರಾಜ್ಯದಲ್ಲಿ ಪುರುಷರಿಗೆ ಸಹಾಯ ಮಾಡಲು ಕೆಲ ಸಂಸ್ಥೆಗಳು ಹುಟ್ಟಿಕೊಂಡಿವೆ. ಭಾಯ್ ಹೆಸರಿನ ಸಂಘಟನೆ ಕೂಡ ಈ ಬಗ್ಗೆ ಕೆಲಸ ಮಾಡ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ 2023 ರ ಮಾಹಿತಿಯ ಪ್ರಕಾರ, ದೇಶದ ಒಟ್ಟು ಆತ್ಮಹತ್ಯೆಗಳಲ್ಲಿ, ಶೇಕಡಾ 9 ರಷ್ಟು ಆತ್ಮಹತ್ಯೆಗಳು ಮಧ್ಯಪ್ರದೇಶದಲ್ಲಿ ದಾಖಲಾಗಿವೆ. ಐದು ವರ್ಷಗಳಲ್ಲಿ, ಮಧ್ಯಪ್ರದೇಶದಲ್ಲಿ ಶೇ. 31.7 ರಷ್ಟು ಆತ್ಮಹತ್ಯೆಗಳು ಕೌಟುಂಬಿಕ ಕಲಹಗಳಿಂದಾಗಿವೆ. ಪ್ರತಿ ದಿನ ಸಹಾಯವಾಣಿಗೆ ನೂರಾರು ಪುರುಷರು ಕರೆ ಮಾಡ್ತಿದ್ದಾರೆ. ಕೆಲಸ ಮಾಡಿ ಜೀವನ ಸಾಗಿಸುವ ಬದಲು ತಿಂಗಳ ಬಹು ಸಮಯವನ್ನು ಕೋರ್ಟ್ನಲ್ಲಿ ಕಳೆಯುತ್ತಿದ್ದಾರೆ.
