Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

Spread the love

ಕರ್ನಾಟಕ ಅರಣ್ಯ ಇಲಾಖೆಯ ಎಲ್ಲಾ ಪಡೆಗಳ ಮುಖ್ಯಸ್ಥರಾಗಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.ಈ ಕುರಿತು ಕರ್ನಾಟಕ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಸನ್ನಕುಮಾರ್‌ ಅವರು ಆದೇಶವನ್ನು ಹೊರಡಿಸಿದ್ದಾರೆ. ಮೀನಾಕ್ಷಿ ನೇಗಿ ಅವರು ಮೂರೂವರೆ ದಶಕದಿಂದ ಕರ್ನಾಟಕದ ಅರಣ್ಯ ಸೇವೆಯಲ್ಲಿ ಕೆಲಸ ಮಾಡುತ್ತಿದ್ದರು. ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿ ನಂತರ ಆಯುಷ್‌ ಇಲಾಖೆ ಆಯುಕ್ತರಾಗಿದ್ದರು. ಕೋವಿಡ್‌ ವೇಳೆ ಅವರು ರೂಪಿಸಿದ್ದ ವೈದ್ಯರೊಂದಿಗಿನ ಆನ್‌ಲೈನ್‌ ಚಟುವಟಿಕೆ ಗಮನ ಸೆಳೆದಿತ್ತು. ಕೇಂದ್ರ ಆಯುಷ್‌ ಇಲಾಖೆಯಲ್ಲೂ ಅವರು ಈ ಹಿಂದೆ ಕೆಲಸ ಮಾಡಿದ್ದರು. ಸದ್ಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದರು. ಮುಂದಿನ ವರ್ಷದ ಅಕ್ಟೋಬರ್‌ವರೆಗೆ ಅವರು ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಇರಲಿದ್ದಾರೆ.


ಕರ್ನಾಟಕದಲ್ಲಿ ಅರಣ್ಯ ಪಡೆಗಳ ಮುಖ್ಯಸ್ಥರಾಗಿದ್ದ ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ಅವರು ಜನವರಿ ಅಂತ್ಯಕ್ಕೆ ನಿವೃತ್ತರಾಗಿದ್ದರು. ಆನಂತರ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಸುಭಾಷ್‌ ಮಾಳ್ಕಡೆ ಅವರೇ ಅರಣ್ಯ ಪಡೆಗಳ ಮುಖ್ಯಸ್ಥರ ಹುದ್ದೆಯನ್ನು ಪ್ರಭಾರಿಯಾಗಿ ವಹಿಸಿಕೊಂಡಿದ್ದರು. ಆನಂತರ ಅರಣ್ಯ ಪಡೆಗಳ ಮುಖ್ಯಸ್ಥರನ್ನು ಯಾರನ್ನು ನೇಮಿಸುತ್ತಾರೆ ಎನ್ನುವ ಕುತೂಹಲವಿತ್ತು.ಏಕೆಂದರೆ ಸುಭಾಷ್‌ ಮಾಳ್ಕಡೆ ಅವರನ್ನೇ ನಿಯೋಜಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ ಅವರಿಗಿಂತ ಸೇವಾ ಹಿರಿತನ ಹೊಂದಿರುವ ಮೀನಾಕ್ಷಿ ನೇಗಿ ಅವರ ಹೆಸರೂ ಇತ್ತು. ಅವರು ಕೇಂದ್ರ ಸೇವೆಯಲ್ಲಿದ್ದುದರಿಂದ ಬರುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆಗಳು ಮುಂದುವರಿದಿದ್ದವು. ಇದರ ನಡುವೆಯೇ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯು ಮೀನಾಕ್ಷಿ ನೇಗಿ ಅವರನ್ನು ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಣಯ ಮಾಡಿತ್ತು. ಕೇಂದ್ರ ಸರ್ಕಾರಕ್ಕೂ ವರದಿ ಸಲ್ಲಿಸಿತ್ತು. ಮೀನಾಕ್ಷಿ ನೇಗಿ ಅವರೂ ಕರ್ನಾಟಕ ಸೇವೆಗೆ ಮರಳುವ ನಿರ್ಧಾರ ಮಾಡಿದ್ದರಿಂದ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈಗ ಕರ್ನಾಟಕ ಸರ್ಕಾರವೂ ಅವರನ್ನು ಅಧಿಕೃತ ಆದೇಶದ ಮೂಲಕವೇ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಅವರು ಸದ್ಯವೇ ಅಧಿಕಾರ ವಹಿಸಿಕೊಳ್ಳಬಹುದು ಎನ್ನಲಾಗಿದೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅರಣ್ಯ ಪಡೆಗಳ ಮುಖ್ಯಸ್ಥರ ಹುದ್ದೆಯನ್ನು ಹಲವು ಮಹಿಳಾ ಅಧಿಕಾರಿಗಳು ನಿಭಾಯಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಅವಕಾಶ ಬಂದಿರಲಿಲ್ಲ. ಹಿಂದೆ ಪಿಸಿಸಿಎಫ್‌ ಆಗಿದ್ದ ಮಧುಶರ್ಮಾ, ರೀತು ಕಕ್ಕರ್‌ ಅವರು ಪಿಸಿಸಿಎಫ್‌ ಆದರೂ ಇಡೀ ಪಡೆಗಳ ಮುಖ್ಯಸ್ಥರಾಗಲು ಆಗಲಿಲ್ಲ. ಈಗ ಮೀನಾಕ್ಷಿ ನೇಗಿ ಅವರಿಗೆ ಈ ಅವಕಾಶ ದೊರೆತಿದೆ.
ಕರ್ನಾಟಕದಲ್ಲಿ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಕೂಡ ಮಹಿಳೆಯಾಗಿದ್ದಾರೆ. ಅರಣ್ಯ ಪಡೆಗಳ ಮುಖ್ಯಸ್ಥರ ಹುದ್ದೆಗೂ ಮಹಿಳೆಯೊಬ್ಬರು ಬಂದಂತಾಗಿದೆ.

ಮೀನಾಕ್ಷಿ ನೇಗಿ ಅವರು ಮೂಲತಃ ಉತ್ತರಾಖಂಡದವರು. 1989ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ. ಕರ್ನಾಟಕದ ಬಳ್ಳಾರಿ, ಚಿಕ್ಕಮಗಳೂರು, ಮಂಡ್ಯ ಸಹಿತ ನಾನಾ ಕಡೆಗಳಲ್ಲಿ ಕೆಲಸ ಮಾಡಿದವರು. ಕರ್ನಾಟಕದಲ್ಲಿ ಇ ಟಿಂಬರ್‌ ನಂತಹ ಯೋಜನೆ ಜಾರಿಗೆ ತಂದು ಕರ್ನಾಟಕ ಅರಣ್ಯ ಇಲಾಖೆ ಆದಾಯವನ್ನು ವೃದ್ದಿಸಿದವರು. ಆಯುಷ್‌ ಇಲಾಖೆಯಲ್ಲಿ ಆಯುಕ್ತರಾಗಿ ಗಮನಾರ್ಹ ಕೆಲಸ ಮಾಡಿದವರು. ಅವರ ಪತಿ ವಿಜಯ್‌ ಶರ್ಮ ಕೂಡ ಐಎಫ್‌ಎಸ್‌ ಅಧಿಕಾರಿಯಾಗಿ ಈಗಷ್ಟೇ ನಿವೃತ್ತರಾಗಿದ್ದಾರೆ. ಕಡಿಮೆ ಮಾತು, ಹೆಚ್ಚು ಕೆಲಸದ ಮೂಲಕವೇ ಸೇವೆಯಲ್ಲಿ ಗುರುತಿಸಿಕೊಂಡಿರುವ ನೇಗಿ ಅವರಿಗೆ ಕೇಂದ್ರ ಸರ್ಕಾರ ಕಳೆದ ತಿಂಗಳು ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿತ್ತು. ಅಂದರೆ ಸರ್ಕಾರದ ಮುಖ್ಯಕಾರ್ಯದರ್ಶಿ ಸಮಾನಾಂತರ ಹುದ್ದೆಯಿದು.


Spread the love
Share:

administrator

Leave a Reply

Your email address will not be published. Required fields are marked *