ಮಲ್ಪೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭಕ್ಕೆ ಸಿದ್ಧತೆ: ಮೀನುಗಾರರಿಗೆ ಈ ವರ್ಷವೂ ಮತ್ಸ್ಯಕ್ಷಾಮದ ಆತಂಕ!

ಮಲ್ಪೆ : ಮಳೆಗಾಲದ 60 ದಿನಗಳ ಯಾಂತ್ರಿಕ ಮೀನುಗಾರಿಕೆ ನಿಷೇಧದ ಅವಧಿ ಜು. 31ಕ್ಕೆ ಮುಕ್ತಾಯವಾಗಲಿದೆ. ಆ. 1ರಿಂದ ಆಳಸಮುದ್ರ ಸೇರಿದಂತೆ ವಿವಿಧ ವರ್ಗದ ಯಾಂತ್ರಿಕ ಮೀನುಗಾರಿಕೆ ಆರಂಭವಾಗಲಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ, ಮಲ್ಪೆ ಬಂದರಿನಲ್ಲಿ ಒಂದು ವಾರ ತಡವಾಗಿ ಪೂರ್ಣ ಪ್ರಮಾಣದಲ್ಲಿ ಮೀನುಗಾರಿಕೆ ಆರಂಭವಾಗುವ ಸಂಭವವಿದೆ.

ಹಾಗೆಯೇ ಮಂಗಳೂರಿನಲ್ಲಿ ಆ. 10 ರಂದು ಮೀನುಗಾರಿಕೆ ಆರಂಭವಾಗುವ ಸಂಭವವಿದೆ. ಜತೆಗೆ ಕಳೆದ ವರ್ಷ ಮತ್ಸ್ಯಕ್ಷಾಮ ಬಾಧಿಸಿತ್ತು. ಈ ವರ್ಷ ಏನಾಗುವುದೋ ಎಂಬ ಆತಂಕದಲ್ಲೇ ಮೀನುಗಾರರು ಸಿದ್ಧರಾಗುತ್ತಿದ್ದಾರೆ.
ಹಿಂದಿನ ವರ್ಷದ ಮೀನುಗಾರಿಕೆ ಮುಗಿಸಿ ವಿಶ್ರಾಂತಿಯಲ್ಲಿದ್ದ ಮೀನುಗಾರರಲ್ಲಿ ಕೆಲವರಷ್ಟೇ ಎರಡು ದಿನಗಳಿಂದ ತಮ್ಮ ಬೋಟುಗಳು, ಎಂಜಿನ್ ದುರಸ್ತಿ ಸೇರಿದಂತೆ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಹೊರ ಜಿಲ್ಲೆಯ ಕಾರ್ಮಿಕರು ಇನ್ನೂ ಬಂದಿಲ್ಲ. ಅವರು ಬಂದ ಬಳಿಕವಷ್ಟೇ ಬಲೆ ಜೋಡಣೆ, ಮೀನುಗಾರಿಕೆಗೆ ತೆರಳಲು ಪೂರ್ಣ ಪ್ರಮಾಣದ ಸಿದ್ಧತೆ ನಡೆಯಲಿದೆ.
ಹೊರಗಿನವರೇ ಕಾರ್ಮಿಕರು
ಮಂಗಳೂರು ಹಾಗೂ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ನಡೆಯಲು ಹೊರ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಕಾರ್ಮಿಕರ ಅವಲಂಬನೆ ಅನಿವಾರ್ಯವಾಗಿದೆ. ಮಲ್ಪೆಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಕಾರ್ಮಿಕರು ಹೆಚ್ಚಾಗಿದ್ದರೆ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಕಾರ್ಮಿಕರೂ ಸ್ವಲ್ಪ ಸಂಖ್ಯೆಯಲ್ಲಿ ಇದ್ದಾರೆ. ಮಂಗಳೂರಿನಲ್ಲಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಅಡಿಭಾಗದಲ್ಲಿ ಕೆಸರು ಎದ್ದಿಲ್ಲ
ಈ ಬಾರಿ ಕರಾವಳಿ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ, ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಸಮಯ ಗಾಳಿ ಬಂದಿತ್ತು, ಆದರೆ ಈ ಹಿಂದಿನ ವರ್ಷಗಳಲ್ಲಿ ನಿರಂತರ ಜೋರಾದ ತೂಫಾನ್ ಆಗಿ ಸಮುದ್ರದ ಅಡಿಭಾಗದ ಕೆಸರು ನೀರು ಮೇಲೆ ಬರುತ್ತಿತ್ತು. ಈಗ ಮಳೆಗಾಳಿ ಬಂದಿದ್ದರೂ ಸಮುದ್ರ ಕೆಸರೆದ್ದು ಉತ್ತಮ ಮೀನುಗಾರಿಕೆಗೆ ಪೂರಕವಾದ ಸನ್ನಿವೇಶ ನಿರ್ಮಾಣವಾಗಿಲ್ಲ ಎನ್ನುತ್ತಾರೆ ಮೀನುಗಾರರು.
ಕಳೆದ ಬಾರಿ ಶೇ. 95 ಬೋಟುಗಳಿಗೆ ನಷ್ಟ
ಆಳಸಮುದ್ರ ಸೇರಿದಂತೆ ಎಲ್ಲ ವರ್ಗದ ಮೀನುಗಾರಿಕೆಯಲ್ಲಿ ಆದಾಯದ ಬಹುಭಾಗ ಬೋಟುಗಳಿಗೆ ಬಳಸುವ ಡಿಸೇಲ್, ಹೊರೆ, ಬಲೆ ಇನ್ನಿತರ ಸಾಮಗ್ರಿಗಳಿಗೆ ವೆಚ್ಚವಾಗುತ್ತದೆ. ಅದರೊಂದಿಗೆ ಹವಾಮಾನ ವೈಪರೀತ್ಯವೂ ಆದಾಯವನ್ನು ಕಡಿಮೆ ಮಾಡುತ್ತದೆ. ಮತ್ಸéಕ್ಷಾಮದಿಂದ ಶೇ. 95 ರಷ್ಟು ಬೋಟುಗಳು ಕಳೆದ ಸಾಲಿನಲ್ಲಿ ನಷ್ಟ ಅನುಭವಿಸಿದ್ದವು. ಮಾತ್ರವಲ್ಲದೆ ಪ್ರಸ್ತುತ ಕಡಲೂ ಮೀನುಗಾರಿಕೆಗೆ ಪೂರಕವಾಗಿಲ್ಲ. ಹಾಗಾಗಿ ಈ ಬಾರಿ ಎಲ್ಲ ಮೀನುಗಾರರು ಕಡಲಿಗಿಳಿಯಲು ಪೂರ್ಣ ಮನಸ್ಸು ಮಾಡುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಅವೈಜ್ಞಾನಿಕ ಮೀನುಗಾರಿಕೆಗೆ ಹೊಡೆತ
ವಿವಿಧ ತಂತ್ರಜ್ಞಾನಗಳು ಬಳಕೆಗೆ ಬಂದಿರುವುದರಿಂದ ಮೀನನ್ನು ಹಿಡಿಯುವ ವಿಧಾನವೂ ಬದಲಾಗಿದೆ.ಅವೈಜ್ಞಾನಿಕ ಮೀನುಗಾರಿಕೆ ಮಾಡುವುದದರಿಂದ ಕರಾವಳಿಯ ಮೀನುಗಾರಿಕೆಗೆ ಬಾರಿ ಹೊಡೆತ ಉಂಟಾಗಿದೆ. ಇತ್ತೀಚೆಗೆ ಸಮುದ್ರದಲ್ಲಿ ಮೀನನ್ನು ಹಿಡಿಯುವ ವಿಧಾನ ಸರಿ ಇಲ್ಲ. ಈ ಹಿಂದಿನ ಮಾದರಿಯನ್ನೇ ಅನುಸರಿಸಬೇಕು. ಜತೆಗೆ ಮಳೆಗಾಲ ನಿಷೇಧದ ಅವಧಿಯು 2 ತಿಂಗಳಿನಿಂದ ಮೂರು ತಿಂಗಳಿಗೆ ವಿಸ್ತರಣೆಯಾದರೆ ಮರಿ ಮೀನಿನ ಬೆಳವಣಿಗೆಯಾಗಿ ಮೀನಿನ ಸಂತತಿ ವೃದ್ಧಿಯಾಗುತ್ತದೆ. ಇದರಿಂದ ಮೀನುಗಾರಿಕೆಯನ್ನು ಉಳಿಸಲು ಸಾಧ್ಯ. ಈ ರೀತಿಯಾಗಲು ಸರಕಾರ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಜಾರಿಗೊಳಿಸಬೇಕು ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಂದರ್ ಅವರು.
ಗುಜರಿ ಬೋಟ್‌ಗಳಿಗೆ
ಸಾಧ್ಯತಾ ಪತ್ರ ಆದೇಶ
ಹೊಸ ಬೋಟು ನಿರ್ಮಾಣಕ್ಕೆ ಸರಕಾರ 1000 ಸಾಧ್ಯತಾ ಪತ್ರ ಬಿಡುಗಡೆ ಮಾಡಿತ್ತು. ಈಗಿರುವ ಬೋಟುಗಳ ಸಂಖ್ಯೆ ಹೆಚ್ಚಳದಿಂದಾಗಿ ಮೀನುಗಾರಿಕೆ ನಷ್ಟದಲ್ಲಿದ್ದು, ಮತ್ತೆ ಹೆಚ್ಚುವರಿ ಸಾಧ್ಯತಾ ಪತ್ರವನ್ನು ನೀಡಿದರೆ ಇನ್ನಷ್ಟು ಸಮಸ್ಯೆಯಾದೀತೆಂದು ಮೀನುಗಾರರು ಆಕ್ಷೇಪಿಸಿದ್ದರು. ಮುಂದಿನ 5 ವರ್ಷದವರೆಗೆ ಯಾವುದೇ ಹೊಸ ಸಾಧ್ಯತಾ ಪತ್ರ ನೀಡದೇ, ಈಗಾಗಲೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ರುವ ಮರದ ಮತ್ತು ಗುಜರಿಗೆ ಒಳಪಟ್ಟಿರುವ ಸ್ಟೀಲ್ ಬೋಟುಗಳಿಗೆ ಮಾತ್ರ ಸಾಧ್ಯತಾ ಪತ್ರವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಯವರು ಒಪ್ಪಿದ್ದು, ಅನುಷ್ಠಾನವಾಗಲಿದೆ ಎನ್ನುತ್ತಾರೆ ಕರ್ನಾಟಕ ಕರಾವಳಿ ಮೀನುಗಾರ ಕ್ರಿಯ ಸಮಿತಿಯ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ.
ಆ. 1 ರಂದು ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಮೀನುಗಾರರರಿಗೆ ಒಳ್ಳೆಯದಾಗಲೆಂದು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಆ.2ರಂದು ಮಲ್ಪೆ ಬಂದರಿನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು. ಆ.3ರಿಂದ ಎಲ್ಲ ವರ್ಗದ ಮೀನುಗಾರರಿಗೆ ಮೀನುಗಾರಿಕೆಗೆ ತೆರಳಬಹುದು.
– ನಾರಾಯಣ ಜೆ. ಕರ್ಕೇರ, ಅಧ್ಯಕ್ಷರು, ಮೀನುಗಾರರ ಸಂಘ
ಯಾಂತ್ರೀಕೃತ ಮೀನುಗಾರಿಕೆ ಆ.1ರಿಂದ ಆರಂಭಗೊಳ್ಳಲಿದ್ದು, ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿ ಕೊಂಡು ಮೀನುಗಾರರು ತಮ್ಮ ದೋಣಿಗಳನ್ನು ಕಡಲಿಗಿಳಿಸಲಿದ್ದಾರೆ.
– ವಿವೇಕ್ ಆರ್., ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ
ಮಲ್ಪೆಯಲ್ಲಿ ಪರ್ಸಿನ್ ಬೋಟುಗಳು ಆ. 10ರಂದು ಗಣಹೋಮ ನಡೆಸಿ, 11ರಂದು ಸಾಮೂಹಿಕ ಪ್ರಾರ್ಥನೆ ಮಾಡಿ ಮೀನುಗಾರಿಕೆಗೆ ತೆರಳಲು ನಿರ್ಧರಿಸಿದೆ.
-ನಾಗರಾಜ್ ಸುವರ್ಣ, ಪರ್ಸಿನ್ ಸಂಘದ ಅಧ್ಯಕ್ಷರು
– ನಟರಾಜ್ ಮಲ್ಪೆ
