ಮೇ 9ರ ಗಲಭೆ ಪ್ರಕರಣಗಳು: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ಇಸ್ಲಾಮಾಬಾದ್: ಮೇ 9ರ ಹಿಂಸಾಚಾರಕ್ಕೆ ಸಂಬಂಧಿಸಿದ ಎಂಟು ಪ್ರಕರಣಗಳಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ನೀಡಿದೆ.

2023ರ ಮೇ 9ರಂದು ಇಸ್ಲಾಮಾಬಾದ್‌ನಲ್ಲಿ ಕಾನೂನು ಜಾರಿ ಅಧಿಕಾರಿಗಳು ಖಾನ್ ಅವರನ್ನು ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ಅವರ ಬೆಂಬಲಿಗರು ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರವನ್ನು ನಡೆಸಿದ್ದರು.
ಗಲಭೆಯಲ್ಲಿ ಪಾತ್ರಕ್ಕೆ ಸಂಬಂಧಿಸಿದಂತೆ ಖಾನ್ ಮತ್ತು ಅವರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ನಾಯಕರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಖಾನ್ ಅವರ ಪರ ವಕೀಲ ಸಲ್ಮಾನ್ ಸಫ್ದರ್ ಮತ್ತು ಪಂಜಾಬ್ ವಿಶೇಷ ಪ್ರಾಸಿಕ್ಯೂಟರ್ ಜುಲ್ಫಿಕರ್ ನಖ್ವಿ ಅವರ ವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ಪೀಠವು ಜಾಮೀನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಫ್ರಿದಿ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಶಫಿ ಸಿದ್ದಿಕಿ ಮತ್ತು ಮಿಯಾಂಗುಲ್ ಔರಂಗಜೇಬ್ ಇದ್ದರು.
ಖಾನ್ ಅವರ ಪಿಟಿಐ ಪಕ್ಷವು ವಿಕ್ಟರಿ ಫಾರ್ ಇಮ್ರಾನ್ ಖಾನ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಎಕ್ಸ್‌ನಲ್ಲಿ ತೀರ್ಪನ್ನು ಶ್ಲಾಘಿಸಿದ್ದಾರೆ. ಆದರೆ, ಖಾನ್ ಅವರ ಅಂತರರಾಷ್ಟ್ರೀಯ ವಕ್ತಾರ ಜುಲ್ಫಿಕರ್ ಬುಖಾರಿ ಅವರು ಪಕ್ಷದ ಮುಖ್ಯಸ್ಥರಿಗೆ ಈಗ ಕೇವಲ ಒಂದು ಪ್ರಕರಣದಲ್ಲಿ ಜಾಮೀನು ಬೇಕಾಗಿದೆ ಎಂದು ಹೇಳಿದ್ದಾರೆ.
ಗಲಭೆ ಪ್ರಕರಣಗಳಲ್ಲಿ ಜಾಮೀನು ಸಿಕ್ಕರೂ ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಶಿಕ್ಷೆ ಆಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಖಾನ್ ಜೈಲಿನಿಂದ ಬಿಡುಗಡೆ ಆಗುವುದಿಲ್ಲ ಎಂದು ಬುಖಾರಿ ಹೇಳಿದ್ದಾರೆ.
