ಪ್ರೀತಿಗೆ ಒಲ್ಲೆ ಎಂದಿದ್ದಕ್ಕೆ ವಿವಾಹಿತೆಯ ಪತಿಯ ಹತ್ಯೆ: ನವಿ ಮುಂಬೈನಲ್ಲಿ 21ರ ಯುವಕನ ಬಂಧನ!

ಮುಂಬೈ: ವಿವಾಹಿತೆಯನ್ನು ಪ್ರೀತಿಸುತ್ತಿದ್ದ 21ರ ಹರೆಯದ ಯುವಕನೋರ್ವ ಆಕೆಯ 35 ವರ್ಷದ ಗಂಡನ ಪರಲೋಕಕ್ಕೆ ಕಳುಹಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ನವಿ ಮುಂಬೈನ ಯುವಕನೋರ್ವ 25ರ ಹರೆಯದ ವಿವಾಹಿತ ಮಹಿಳೆಯ ಹಿಂದೆ ಬಿದ್ದು, ವಿವಾಹವಾಗುವಂತೆ ಪೀಡಿಸಲು ಶುರು ಮಾಡಿದ್ದ.

ಆದರೆ ಆಕೆ ಈ 21ರ ತರುಣನ ಪ್ರೇಮಕ್ಕೆ ಒಲ್ಲೆ ಎಂದಿದ್ದು, ಇದರಿಂದ ಕುಪಿತಗೊಂಡ ಆತ ತಾನು ಪ್ರೀತಿಸುತ್ತಿದ್ದ ಮಹಿಳೆಯ ಗಂಡನನ್ನೇ ಹತ್ಯೆ ಮಾಡಿದ್ದಾನೆ.
ಪ್ರೇಮಕ್ಕೆ ಒಲ್ಲೆ ಎಂದ ಮಹಿಳೆಯ ಗಂಡನಿಗೆ ಮುಹೂರ್ತ:
25ರ ಹರೆಯದ ಫಾತಿಮಾ ಮಂಡಲ್ ಹಾಗೂ ಆಕೆಯ ಪತಿ ಆಕೆಗಿಂತ 10 ವರ್ಷ ಹಿರಿಯವನಾದ ಅಬುಬಕ್ಕರ್ ಸುಹದ್ಲಿ ಮಂಡಲ್ ನವಿ ಮುಂಬೈನ ವಾಶಿಯಲ್ಲಿ ವಾಸ ಮಾಡುತ್ತಿದ್ದರು. ಆರೋಪಿ 21ರ ಪ್ರಾಯದ ಅಮಿನುಲ್ ಅಲಿ ಅಹ್ಮದ್, ಫಾತಿಮಾಳನ್ನು ಪ್ರೀತಿಸುತ್ತಿದ್ದು, ಆಕೆಗೆ ದಿನವೂ ತನ್ನನ್ನು ಮದುವೆಯಾಗುವಂತೆ ಅಮಿನುರ್ ಅಹ್ಮದ್ ಪೀಡಿಸುತ್ತಿದ್ದ. ಆದರೆ ಮದುವೆಯಾಗುವುದಕ್ಕೆ ಫಾತಿಮಾ ನಿರಾಕರಿಸಿದ್ದಾಳೆ.
ನಾಪತ್ತೆ ದೂರು ದಾಖಲಿಸಿದ ಪತ್ನಿ:
ಪರಿಣಾಮ ಸೋಮವಾರ ಕೆಲಸಕ್ಕೆ ಹೋದ ಫಾತಿಮಾ ಪತಿ ಅಬುಬಕ್ಕರ್ ವಾಪಸ್ ಮನೆಗೆ ಬಂದಿಲ್ಲ, ಈ ಹಿನ್ನೆಲೆಯಲ್ಲಿ ಫಾತಿಮಾ ಗಂಡ ಕಾಣೆಯಾದ ಬಗ್ಗೆ ನಾಪತ್ತೆ ದೂರು ದಾಖಲಿಸಿದ್ದಳು. ಅಲ್ಲದೇ ಅಮಿನುಲ್ ಅಲಿ ಅಹ್ಮದ್ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂಬುದನ್ನು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಅನುಮಾನದ ಮೇರೆಗೆ ಅಮಿನುಲ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತನೇ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿ ಅಬುಬಕ್ಕರ್ ಅವರನ್ನು ಕೊಲೆ ಮಾಡಿ ಶವವನ್ನು ಚೀಲಕ್ಕೆ ತುಂಬಿ ವಾಶಿಯಲ್ಲಿ ಮೋರಿಗೆ ಎಸೆದಿದ್ದ. ಅಲ್ಲದೇ ಸಾಕ್ಷ್ಮಿ ನಾಶ ಮಾಡುವುದಕ್ಕಾಗಿ ಆರೋಪಿ ಅಮೀನುಲ್ ಕೊಲೆ ಮಾಡುವ ವೇಳೆ ತಾನು ಧರಿಸಿದ್ದ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಪನ್ವೆಲ್-ಸಿಯಾನ್ ರಸ್ತೆಯ ವಾಶಿ ಗ್ರಾಮದ ಅಂಡರ್‌ಪಾಸ್ ಬಳಿಯ ಚರಂಡಿಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯ ನಂತರ ಬುಧವಾರ ಬೆಳಗ್ಗೆ ವಾಶಿಯ ಹೊಳೆಯಲ್ಲಿ ಅಬೂಬಕರ್ ಅವರ ಮೃತದೇಹ ಪತ್ತೆಯಾಗಿದ್ದು, ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಅಮೀನುಲ್‌ನನ್ನು ಬಂಧಿಸಿ ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಈ ಕೊಲೆ ಮಾಡಲು ಅವನಿಗೆ ಸಹಾಯ ಮಾಡಿದನೆಂದು ನಂಬಲಾದ ಆತನ ಸ್ನೇಹಿತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
