ಬೈಜೂಸ್ ಖರೀದಿ ರೇಸ್‌ನಲ್ಲಿ ಮಣಿಪಾಲ್ ಗ್ರೂಪ್: ದಿವಾಳಿ ಅಂಚಿನಲ್ಲಿರುವ ಎಜ್ಯುಟೆಕ್ ಕಂಪನಿಯ ಖರೀದಿಗೆ ರಂಜನ್ ಪೈ ಒಡೆತನದ MEMG ಸಜ್ಜು?

ಬೆಂಗಳೂರು: ಎಜ್ಯುಟೆಕ್ ಸ್ಟಾರ್ಟಪ್ ಬೈಜೂಸ್ ಕಂಪನಿಯನ್ನು ಶತಕೋಟ್ಯಧಿಪತಿ ರಂಜನ್ ಪೈ (Ranjan Pai) ಒಡೆತನದ ಮಣಿಪಾಲ್ ಎಜುಕೇಶನ್ & ಮೆಡಿಕಲ್ ಗ್ರೂಪ್ ಖರೀದಿ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ಹೌದು. ದಿವಾಳಿ ಪ್ರಕ್ರಿಯೆಗಳು ನಡೆಯುತ್ತಿರುವ ನಡುವೆ ಬೈಜೂಸ್‌ನ (Byju’s) ಪೋಷಕ ಕಂಪನಿಯಾದ ಥಿಂಕ್ & ಲರ್ನ್ ಖರೀದಿಸಲು ಮಣಿಪಾಲ್ ಎಜುಕೇಶನ್ & ಮೆಡಿಕಲ್ ಗ್ರೂಪ್ (MEMG) ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
MEMG ಸಂಭಾವ್ಯ ಬಿಡ್ಡರ್ ಆಗಿ ಹೊರಹೊಮ್ಮಿದ್ದು, ಈಗ ಸ್ವತ್ತುಗಳನ್ನು ಪರಿಶೀಲಿಸುತ್ತದೆ ಎಂದು ಮೂಲವೊಂದನ್ನು ಆಧರಿಸಿ ಸುದ್ದಿ ಪ್ರಕಟಿಸಿದೆ.
ಥಿಂಕ್ & ಲರ್ನ್ ಕಂಪನಿಯಲ್ಲಿ ಆಕಾಶ್ ಎಜುಕೇಶನ್ ಸರ್ವಿಸ್ 25% ಪಾಲನ್ನು ಹೊಂದಿದೆ. ಈ ಆಕಾಶ್‌ನಲ್ಲಿ ಮಣಿಪಾಲ ಗ್ರೂಪ್ ಅತಿ ಹೆಚ್ಚು 58% ಪಾಲನ್ನು ಹೊಂದಿದೆ. ವೈದ್ಯಕೀಯ (NEET) ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು (JEE) ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಆಕಾಶ್ ಸಂಸ್ಥೆಯು ಸಮಗ್ರ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳನ್ನು ಒದಗಿಸುತ್ತದೆ
ಬೈಜೂಸ್ ಅಕ್ರಮಗಳು ಬೆಳಕಿಗೆ ಬಂದಿದ್ದು ಹೇಗೆ?
ಬೈಜೂಸ್ 2019 ರಿಂದ 2022ರ ವರೆಗೆ ಮೂರು ವರ್ಷಗಳ ಅವಧಿಗೆ ಬಿಸಿಸಿಐ ಜೊತೆಗೆ ಜೆರ್ಸಿ ಪ್ರಾಯೋಕತ್ವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದನ್ನು 2023ರವರೆಗೂ ವಿಸ್ತರಿಸಿಕೊಂಡಿತ್ತು. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ 158.9 ಕೋಟಿ ರೂ.ಗಳನ್ನು ಬಿಸಿಸಿಐಗೆ ಪಾವತಿಸದ ಕಾರಣ ಬೈಜೂಸ್ ವ್ಯವಹಾರಗಳು, ಲೆಕ್ಕ ಪತ್ರಗಳು ಸರಿ ಇಲ್ಲ ಎನ್ನುವುದು ಬೆಳಕಿಗೆ ಬಂದಿತ್ತು. ಅಕ್ರಮದ ವಾಸನೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಡಿ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಕಚೇರಿ ಮೇಲೆ ದಾಳಿ ಮಾಡಿತ್ತು
ಕಂಪನಿಯು 2011 ಮತ್ತು 2023 ರ ನಡುವೆ 28,000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಹೂಡಿಕೆಯನ್ನು (FDI) ಸ್ವೀಕರಿಸಿತ್ತು. ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಅದೇ ಅವಧಿಯಲ್ಲಿ ವಿದೇಶಿ ನ್ಯಾಯವ್ಯಾಪ್ತಿಗೆ ಸರಿಸುಮಾರು 9,754 ಕೋಟಿ ರೂ. ಕಳುಹಿಸಿದೆ. ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಹಣ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ. ಲೆಕ್ಕ ತೋರಿಸಿತ್ತು. ಹೀಗಿದ್ದರೂ ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ ಎಂದು ಇಡಿ ಹೇಳಿತ್ತು.
ಕೋವಿಡ್ ಬಳಿಕ ಬೈಜೂಸ್ ಭಾರೀ ನಷ್ಟವನ್ನು ಅನುಭವಿಸಿತ್ತು. 2020ರ ಹಣಕಾಸು ವರ್ಷದಲ್ಲಿ 262 ಕೋಟಿ ರೂ. ನಷ್ಟ ಅನುಭವಿಸಿದ್ದರೆ 2021ರ ಆರ್ಥಿಕ ವರ್ಷದಲ್ಲಿ 4,588 ಕೋಟಿ ನಷ್ಟ ಅನುಭವಿಸಿತ್ತು. ನಷ್ಟಕ್ಕೂ ಮೊದಲು ಒಟ್ಟು 22 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಬೈಜೂಸ್ ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟಪ್ ಕಂಪನಿ ಎಂದು ಹೆಸರು ಪಡೆದಿತ್ತು.