ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್: ನೆಲ್ಯಾಡಿಯಲ್ಲಿ ಮತ್ತೆ ಗುಡ್ಡ ಕುಸಿತ

ನೆಲ್ಯಾಡಿ : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ ಆಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಸಮಯ ಹೆದ್ದಾರಿಗೆ ಮಣ್ಣು ಬಿದ್ದು ಸಂಪೂರ್ಣ ಹೆದ್ದಾರಿ ಬಂದ್ ಆಗಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಪದೇ ಪದೇ ಹೆದ್ದಾರಿ ಮಣ್ಣು ಬೀಳುತ್ತಿದ್ದರೂ ಯಾವುದೇ ಶಾಶ್ವತ ಕ್ರಮ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು, ಪ್ರಯಾಣಿಕರು ಆಕೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಮುಂದೆ ಹೋಗಲಾಗದೆ, ಬಹಳ ಹೊತ್ತು ಟ್ರಾಫಿಕ್ ಜಾಂ ಉಂಟಾಯಿತು. ನಂತರ ಬದಲಿ ರಸ್ತೆಯಲ್ಲಿ ಸಂಚರಿಸುತ್ತಿವೆ. ಸ್ಥಳಕ್ಕೆ ನೆಲ್ಯಾಡಿ ಹೋರಾಟಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಕಳೆದ ವಾರವೂ ಇಲ್ಲಿ ಮಣ್ಣು ಕುಸಿದು ಮೂರು ಗಂಟೆ ಕಾಲ ಹೆದ್ದಾರಿ ಬಂದ್ ಆಗಿತ್ತು. ಮಳೆಗಾಲ ಆರಂಭಗೊಂಡ ಮೇಲೆ ಇಲ್ಲಿ ಐದಾರು ಬಾರಿ ಮಣ್ಣು ಕುಸಿದಿದೆ. ಹೆದ್ದಾರಿ ಚತುಷ್ಪಥಗೊಳಿಸುವಾಗ ಗುಡ್ಡವನ್ನು ಲಂಬವಾಗಿ ಕತ್ತರಿಸಿದ್ದೇ ಈ ಅವಾಂತರಕ್ಕೆ ಕಾರಣ.
