ಮಂಗಳೂರು: ಆಟೋ ಚಾಲಕರ ಕಿರುಕುಳಕ್ಕೆ ಬೇಸತ್ತು ಮಹಿಳಾ ಬೀದಿ ವ್ಯಾಪಾರಿ ಆತ್ಮಹತ್ಯೆಗೆ ಯತ್ನ

ಮಂಗಳೂರು: ಕಳೆದ 13 ವರ್ಷಗಳಿಂದ ಬೋಂದೆಲ್ ಜಂಕ್ಷನ್ ಬಳಿ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಬಡ ಬೀದಿ ವ್ಯಾಪಾರಿ ಮಹಿಳೆ ಶಾಲಿನಿ (38ವರ್ಷ ) ಆಟೋ ರಿಕ್ಷಾ ನಿಲ್ದಾಣದ ಹೆಸರಿನಲ್ಲಿ ಬೀದಿ ವ್ಯಾಪಾರಕ್ಕೆ ಅನಗತ್ಯ ತೊಂದರೆ ಮತ್ತು ಪಾಲಿಕೆ ಅಧಿಕಾರಿಗಳ ಕಿರುಕುಳ ದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಕ್ಕೆ ಕಾರಣವಾದ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ತೀವ್ರವಾಗಿ ಖಂಡಿಸಿದೆ ಮತ್ತು ಮಹಿಳೆಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

ಪಾಲಿಕೆಯ ಅನುಮೋದನೆ ಇಲ್ಲದೆ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನಧಿಕೃತವಾಗಿ ನಿರ್ಮಿಸಿರುವ ಆಟೋ ರಿಕ್ಷಾ ನಿಲ್ದಾಣದ 50ಮೀಟರ್ ದೂರದಲ್ಲಿ ಶಿಸ್ತುಬದ್ದವಾಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರೂ ಮಹಿಳೆಗೆ ಅವಮಾನ ಆಗುವ ರೀತಿಯಲ್ಲಿ ನಿಂದನೆ ಮಾಡುವುದು ಮತ್ತು ಮಹಿಳೆಯ ಸ್ಟಾಲಿಗೆ ಅಡ್ಡಲಾಗಿ ರಿಕ್ಷಾ ನಿಲ್ಲಿಸುವುದು,ಅವರ ಸರಕುಗಳನ್ನು ಹಾನಿ ಮಾಡುವುದು, ಬೆದರಿಕೆ ಹಾಕುವುದು ಮತ್ತು ರಾಜಕೀಯ ಪ್ರಭಾವ ಬಳಸಿಕೊಂಡು ಅಧಿಕಾರಿಗಳಿಂದ ಎಚ್ಚರಿಕೆ ನೀಡುವಂತ ರೀತಿಯಲ್ಲಿ ಮಹಿಳೆಯ ಮೇಲೆ ನಿರಂತರ ಮಾನಸಿಕ ಕಿರುಕುಳ ನೀಡಿರುವ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ರಾಜಕೀಯ ಒತ್ತಡದಿಂದ ಮಹಿಳೆಗೆ ಕಿರುಕುಳ ನೀಡಿರುವ ಪಾಲಿಕೆಯ ಅಧಿಕಾರಿಗಳನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರ್ಯಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಆಗ್ರಹಿಸಿದ್ದಾರೆ
ರಿಕ್ಷಾ ಚಾಲಕರಿಂದಲೇ ದೌರ್ಜನ್ಯ ನಡೆದಿರುವುದು ದುರಾದೃಷ್ಟಕರ- ಬಿಕೆ ಇಮ್ತಿಯಾಜ್
ಒಬ್ಬ ಸ್ಥಳೀಯ ಆಡಳಿತಾರೂಢ ರಾಜಕೀಯ ಪಕ್ಷದ ಮುಖಂಡರೊಬ್ಬರ ಪ್ರೇರಣೆಯಿಂದ ರಿಕ್ಷಾ ಚಾಲಕರು ಬಡ ಬೀದಿಬದಿ ಮಹಿಳಾ ವ್ಯಾಪಾರಿಯ ಮೇಲೆ ಒಂದು ತಿಂಗಳಿನಿಂದ ಮಾನಸಿಕ ಕಿರುಕುಳ ನೀಡಿರುವುದು ದುರದೃಷ್ಟಕರ ಮತ್ತು ಆಟೋ ರಿಕ್ಷಾ ಪಾರ್ಕ್ ನಿರ್ಮಾಣಕ್ಕೆ ವಿಶಾಲ ಜಾಗ ಇದ್ದರೂ ಸಂಚಾರಕ್ಕೆ ತೊಂದರೆ ಆಗುವ ಜಾಗದಲ್ಲಿ ಆಟೋ ಪಾರ್ಕ್ ನಿರ್ಮಿಸಿದ್ದಾರೆ.
ನಗರ ಪಾಲಿಕೆ ಮತ್ತು ಸಂಚಾರಿ ಪೋಲೀಸರ ಅನುಮೋದನೆ ಇಲ್ಲದೆ ಆಟೋ ಪಾರ್ಕ್ ನಿರ್ಮಾಣ ಕಾನೂನು ಬಾಹಿರ ಕ್ರಮವಾಗಿದೆ ಮಹಿಳಾ ವ್ಯಾಪಾರಿಗೆ ಕಿರುಕುಳ ನೀಡಿದವರ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾದರೆ ಬೀದಿಬದಿ ವ್ಯಾಪಾರಸ್ಥರಿಂದ ಬೋಂದೆಲ್ ಚಲೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಇದರ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಪತ್ರಿಕಾ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
