ಮಂಗಳೂರು: ರೈಲಿನಲ್ಲಿ ಸೀಟಿಗಾಗಿ ಜಗಳ, ಚೈನ್ ಎಳೆದು ರೈಲು ನಿಲ್ಲಿಸಿದ ಪ್ರಕರಣ

ಮಂಗಳೂರು: ರೈಲಿನಲ್ಲಿ ಸೀಟಿಗಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳವಾಗಿ, ಚೈನ್ ಎಳೆದು ರೈಲು ನಿಲ್ಲಿಸಿದ ಕಾರಣಕ್ಕೆ 1,500 ರೂ. ದಂಡ ಕಟ್ಟಿದ ಘಟನೆ ಸೋಮವಾರ ನಡೆದಿದೆ.
ಸುಬ್ರಹ್ಮಣ್ಯದಿಂದ ಬೆಳಗ್ಗೆ ಹೊರಟ ಪ್ಯಾಸೆಂಜರ್ ರೈಲಿ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.
ಬಂಟ್ವಾಳದಲ್ಲಿ ಸೀಟಿನ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ಉಂಟಾಗಿದೆ. ಈ ವೇಳೆ ಒಬ್ಬ ಪ್ರಯಾಣಿಕ ತುರ್ತು ಚೈನ್ ಎಳೆದಿದ್ದಾನೆ. ತತ್ಕ್ಷಣ ರೈಲು ನಿಂತಿದ್ದು, ಅಧಿಕಾರಿಗಳು ಬಂದು ಮಾಹಿತಿ ಪಡೆದರು. ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪಿದಾಗ ಚೈನ್ ಎಳೆದ ವ್ಯಕ್ತಿಯನ್ನು ಆರ್ಪಿಎಫ್ ಆಧಿಕಾರಿಗಳು ವಿಚಾರಣೆ ನಡೆಸಿ, ದಂಡ ವಿಧಿಸಿ ಎಚ್ಚರಿಸಿದ್ದಾರೆ.