ಮಂಗಳೂರು: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮತ್ತೆ ಹೊಡೆದಾಟ

ಮಂಗಳೂರು: ಮಂಗಳೂರಿನ ಕೊಡಿಯಾಲ್ ಬೈಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮತ್ತೆ ಹೊಡೆದಾಟ ನಡೆದಿದೆ. ಗುರುವಾರ (ಜೂ.26) ಜೈಲಿನ ಒಳಗಡೆ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಉಳ್ಳಾಲದ ನಟೋರಿಯಸ್ ರೌಡಿ ಮುಖ್ತಾರ್ ಹಾಗೂ ಇತರೆ ಕೈದಿಗಳ ಮಧ್ಯೆ ಗಲಾಟೆಯಾಗಿದೆ.
ಮುಖ್ತಾರ್ ಮತ್ತೊಬ್ಬ ಕೈದಿ ಕೇಶವ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕೇಶವನನ್ನು ವೆನ್ಲಾಕ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

2023ರ ನ.6ರಂದು ನಡೆದಿದ್ದ ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿ ಕೇಶವ ಜೈಲಿವಾಸ ಅನುಭವಿಸುತ್ತಿದ್ದಾನೆ. ಉಳ್ಳಾಲ ಧರ್ಮನಗರ ನಿವಾಸಿಯಾಗಿರುವ ಆರೋಪಿ ಮಹಮದ್ ಮುಖ್ತಾರ್ 15 ಪ್ರಕರಣಗಳಲ್ಲಿ ಆರೋಪಿಯಾಗಿದ್ದು, 2022ರ ಜುಲೈನಲ್ಲಿ ಈತನ ಕಾಲಿಗೆ ಗುಂಡಿಕ್ಕಿ ಬಂಧನ ಮಾಡಲಾಗಿತ್ತು.
ಸದ್ಯ ಜೈಲು ಗಲಾಟೆ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿಗೆ ಬರ್ಕೆ ಠಾಣೆ ಪೊಲೀಸರು ಹಾಗೂ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಹಲವು ಬಾರಿ ಕೈದಿಗಳ ನಡುವಿನ ಸಂಘರ್ಷ ನಡೆದಿದ್ದು, ಇಲ್ಲಿನ ಭದ್ರತೆ ಮತ್ತು ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ.