ಮಂಗಳೂರಿನ ಲ್ಯಾಂಡ್‌ಮಾರ್ಕ್ ಎಂಸಿಎಫ್ ಇನ್ನು ಇತಿಹಾಸ: ‘ಪಾರಾದೀಪ್ ಫಾಸ್ಪೇಟ್ಸ್ ಲಿಮಿಟೆಡ್’ ಆಗಿ ವಿಲೀನ ಪ್ರಕ್ರಿಯೆ ಸಂಪೂರ್ಣ; ಅಕ್ಟೋಬರ್ 31 ರಿಂದ ಹೊಸ ನಾಮಕರಣ

ಮಂಗಳೂರು : ಎಂಸಿಎಫ್ ಮತ್ತು ಪಾರಾದೀಪ್ ಫಾಸ್ಪೇಟ್ಸ್ ಕಂಪೆನಿಗಳ ವಿಲೀನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇನ್ನು ಮುಂದೆ ಎಂಸಿಎಫ್ ಪಾರಾದೀಪ್ ಫಾಸ್ಪೇಟ್ಸ್ ಲಿ. ಆಗಿ ಹೆಸರು ಬದಲಾವಣೆಯಾಗಲಿದೆ. ಇದರೊಂದಿಗೆ ಮಂಗಳೂರಿನ ಲ್ಯಾಂಡ್ ಮಾರ್ಕ್ ಆಗಿದ್ದ ಕಂಪೆನಿ ಹೊಸ ಹೆಸರಿನೊಂದಿಗೆ ಕಾರ್ಯ ನಿರ್ವಹಿಸಲಿದೆ.

ಅಕ್ಟೋಬರ್ 16 ರಿಂದ ಪಾರಾದೀಪ್ ಫಾಸ್ಪೇಟ್ಸ್ ಎಂಸಿಎಫ್ ನ್ನು ಸಂಪೂರ್ಣವಾಗಿ ತನ್ನ ಅಧಿಕಾರ ವ್ಯಾಪ್ತಿಗೆ ತೆಗೆದುಕೊಂಡಿದೆ. ಅಕ್ಟೋಬರ್ 31ರಿಂದ ಅಧಿಕೃತ ಹೊಸ ಬೋರ್ಡ್ ನೊಂದಿಗೆ ಕಾರ್ಯರಂಭ ಮಾಡಲಿದೆ. ಇದರೊಂದಿಗೆ ಪಾರಾದೀಪ್ ಫಾಸ್ಪೇಟ್ಸ್ ದೇಶದ ಪ್ರಮುಖ ರಸಗೊಬ್ಬರ ಉತ್ಫಾದನಾ ಕಂಪೆನಿಯಾಗಿ ಹೊರಬರಲಿದೆ.
ಎಂಸಿಎಫ್ ಸಾಗಿಬಂದ ಹೆಜ್ಜೆ…: 1966ರಲ್ಲಿ ದುಗ್ಗಲ್ ಎಂಟರ್‌ಪ್ರೈಸಸ್ ಮಲಬಾರ್ ಕೆಮಿಕಲ್ಸ್ ಎಂಡ್ ಫರ್ಟಿಲೈಸರ್ಸ್ ಪ್ರೈ. ಲಿ. ಹೆಸರಿನಲ್ಲಿ ಯೋಜನೆ ಆರಂಭಿಸಿತ್ತು. 1969ರಲ್ಲಿ ಪ್ರಾಯೋಜಕರು ಹಿಂದೆ ಸರಿದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಕೈಗೆ ಬಂತು. ಅದು ಮಂಗಳೂರು ಕೆಮಿಕಲ್ಸ್ ಎಂಡ್ ಫರ್ಟಿಲೈಸರ್ಸ್ ಆಗಿದ್ದು 1971ರಲ್ಲಿ. 1972ರ ಅ. 15ರಂದು ದೇವರಾಜ್ ಅರಸು ಅವರಿಂದ ಅಡಿಗಲ್ಲು. 1974ರಲ್ಲಿ ಕಾರ್ಯಾರಂಭ. 1990: 600 ಕೋಟಿ ನಷ್ಟದೊಂದಿಗೆ ಯು.ಬಿ. ಗ್ರೂಪ್‌ಗೆ ಹಸ್ತಾಂತರ. ಶೇ. 30 ಸರಕಾರಿ ಪಾಲುದಾರಿಕೆ. 03.07.2013: ಶೇ. 24.46 ಶೇರುಗಳು ದೀಪಕ್ ಎಂಟರ್‌ಪ್ರೈಸಸ್‌ಗೆ ಹಸ್ತಾಂತರ.
ಪ್ರಾರಂಭದಲ್ಲಿ ಸಾರ್ವಜನಿಕ ಉದ್ದಿಮೆಯಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ದೊಡ್ಡ ರಸಗೊಬ್ಬರ ಕಾರ್ಖಾನೆ ಯಾಗಿ ಪ್ರಾರಂಭವಾಯಿತು. ಕಂಪೆನಿಯು ಯೂರಿಯಾ, ಡೈಅಮೋನಿಯಂ ಫಾಸ್ಫೇಟ್, ಹರಳಾಗಿಸಿದ ರಸಗೊಬ್ಬರಗಳು, ದ್ರವಗೊಬ್ಬರಗಳು, ಮಣ್ಣಿನ ಕಂಡಿ ಷನರ್‌ಗಳು, ಮ್ಯೂರಿಯೇಟ್ ಆಫ್ ಪೊಟ್ಯಾಶ್, ಮಣ್ಣಿನ ಸೂಕ್ಷ್ಮ ಪೋಷಕಾಂಶಗಳು, ವಿಶೇಷ ರಸ ಗೊಬ್ಬರಗಳು, ಆಹಾರ ದರ್ಜೆಯ ಅಮೋನಿಯಂ ಬೈಕಾರ್ಬನೇಟ್, ಕೈಗಾರಿಕಾ ರಾಸಾಯನಿಕಗಳಾದ ಸಲ್‌ಫ್ಯೂರಿಕ್ ಆಮ್ಲ ಮತ್ತು ಸಲ್ಫೋನೇಟೆಡ್ ಹರಳಾಗಿಸಿದ ರಸಗೊಬ್ಬರಗಳೊಂದಿಗೆ ವ್ಯವಹರಿಸುತ್ತಾ ಬಂದಿದೆ. ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ರೈಲ್ವೆ ಸಂಪರ್ಕ ಹೊಂದಿದ ಕಾರ್ಖಾನೆ ಇದಾಗಿತ್ತು.