Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಡ್ಯ ವಿಷಾಹಾರ ಪ್ರಕರಣ: ಮೇಘಾಲಯದ 22 ಮಕ್ಕಳನ್ನು ಪೋಷಕರಿಗೆ ಒಪ್ಪಿಸಲು ಹೈಕೋರ್ಟ್ ಆದೇಶ

Spread the love

ಬೆಂಗಳೂರು: ಮಂಡ್ಯದ ಮಳವಳ್ಳಿ ತಾಲೂಕಿನ ಟಿ.ಕಾಗೇಪುರದ ಗೋಕುಲ ವಸತಿ ಶಾಲೆಯಲ್ಲಿ ಕಳೆದ ಮಾರ್ಚ್ 16ರಂದು ನಡೆದ ವಿಷಾಹಾರ ಸೇವನೆ ಪ್ರಕರಣದ ಬಳಿಕ ಮಂಡ್ಯದ ಬಾಲಮಂದಿರದ ಸುಪರ್ದಿಯಲ್ಲಿರುವ ಮೇಘಾಲಯ ರಾಜ್ಯದ 22 ಮಕ್ಕಳನ್ನು ವಿಮಾನದ ಮೂಲಕ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಮೇಘಾಲಯದ ಎಲ್ಲ 22 ಮಕ್ಕಳ ಪೋಷಕರ ಪರವಾಗಿ ಅಲ್ಲಿನ ಜೈಂಟಿಯಾ ಹಿಲ್ಸ್​ ಜಿಲ್ಲೆಯ ನಿವಾಸಿ ವಯ್ಲಾಡ್ ನಾಂಗ್ಟುಡು ಎಂಬವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

ಈ ವೇಳೆ ಸರ್ಕಾರದ ಪರ ವಕೀಲರು, ”ಮೇಘಾಲಯ ರಾಜ್ಯದ 22 ಮಕ್ಕಳು ಸರ್ಕಾರಿ ಬಾಲಮಂದಿರದ ಸುಪರ್ದಿಯಲ್ಲಿದ್ದಾರೆ. ಮಕ್ಕಳ ಕಲ್ಯಾಣ ಅಧಿಕಾರಿ (ಸಿಡಬ್ಲ್ಯೂಒ) ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ಅವರ ಹಿತದೃಷ್ಟಿಯಿಂದ ಎಲ್ಲಾ 22 ಮಕ್ಕಳನ್ನು ವಿಮಾನದ ಮೂಲಕ ಅವರ ಪೋಷಕರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ವಿವರಿಸಿದರು.

”ಅಲ್ಲದೆ, ವಿಮಾನಯಾನಕ್ಕೆ ತಗಲುವ ವೆಚ್ಚವನ್ನು ಬಾಲನ್ಯಾಯ ನಿಧಿಯಿಂದ ಬಿಡುಗಡೆ ಮಾಡುವಂತೆ ಬಾಲನ್ಯಾಯ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳನ್ನು ಮೇಘಾಲಯ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಲಾಗಿದೆ. ಮುಂದಿನ ಕ್ರಮವನ್ನು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಕೈಗೊಳ್ಳಲಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಮಾಧ್ಯಮ ಪ್ರಕಟಣೆ ಹೊರಡಿಸಬಾರದು: ಅರ್ಜಿದಾರರ ಪರ ವಕೀಲರು, ”ಇದೊಂದು ಮಕ್ಕಳಿಗೆ ಸಂಬಂಧಿಸಿದ ವಿಚಾರವಾಗಿದ್ದು, ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸುವ ತನಕ ಸರ್ಕಾರ ಹಾಗೂ ಸಂಬಂಧ ಪ್ರಾಧಿಕಾರಗಳಿಂದ ಯಾವುದೇ ಬಹಿರಂಗ ಹೇಳಿಕೆ, ಮಾಧ್ಯಮ ಪ್ರಕಟಣೆ ಹೊರಡಿಸಬಾರದು” ಎಂದು ಮನವಿ ಮಾಡಿದರು. ಅದಕ್ಕೆ, ”ಆ ತರಹದ ಯಾವುದೇ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆಗೊಳಿಸುವುದಿಲ್ಲ” ಎಂದು ಸರ್ಕಾರದ ಪರ ವಕೀಲರು ಭರವಸೆ ನೀಡಿದರು.

”ಮಕ್ಕಳ ಪೋಷಕರು ಗುರುವಾರ ಬೆಂಗಳೂರಿಗೆ ತಲುಪಲಿದ್ದು, ಮಕ್ಕಳನ್ನು ಭೇಟಿ ಮಾಡಲು ಹಾಗೂ ಅವರೊಂದಿಗೆ ಕಾಲ ಕಳೆಯುವುದಕ್ಕೆ ಅವಕಾಶ ನೀಡಬೇಕು” ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ, ”ಬಾಲ ಮಂದಿರದಲ್ಲೇ ಮಕ್ಕಳನ್ನು ಪೋಷಕರು ಭೇಟಿ ಮಾಡುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ” ಎಂದು ಸರ್ಕಾರದ ಪರ ವಕೀಲರು ಹೇಳಿದರು.

ಕೆಲವರು ಮಕ್ಕಳ ಭೇಟಿಗೆ ಬಂದಿಲ್ಲ: ನ್ಯಾಯಾಲಯದ ಆದೇಶದಂತೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ಮಕ್ಕಳ ಕಲ್ಯಾಣ ಅಧಿಕಾರಿ, ”ಪ್ರಕರಣದ ನಡೆದ ಶಿಕ್ಷಣ ಸಂಸ್ಥೆಗೆ ಶಾಲೆ ನಡೆಸಲು ಮಾತ್ರ ಪರವಾನಿಗೆ ಇತ್ತು. ಆದರೆ, ವಸತಿ ಶಾಲೆ ನಡೆಸಲು ಅನುಮತಿ ಇರಲಿಲ್ಲ. ಬಾಲಮಂದಿರದಲ್ಲಿರುವ ಮಕ್ಕಳಿಗೆ ವಿಡಿಯೋ ಕಾಲ್ ಮೂಲಕ ಪೋಷಕರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ. 22 ಮಕ್ಕಳ ಪೈಕಿ 16 ಮಕ್ಕಳ ಪೋಷಕರು 2022ರಿಂದ ಅವರನ್ನು ಭೇಟಿ ಮಾಡಲು ಬಂದೇ ಇಲ್ಲ” ಎಂದು ಪೀಠಕ್ಕೆ ವಿವರಿಸಿದರು.

ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು: ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, 22 ಮಕ್ಕಳು, ಮಕ್ಕಳ ಕಲ್ಯಾಣ ಅಧಿಕಾರಿ ಹಾಗೂ ಇತರರ ವಿಮಾನ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ಬಾಲನ್ಯಾಯ ಮಂಡಳಿ ತಕ್ಷಣ ಬಿಡುಗಡೆಗೊಳಿಸಬೇಕು. ಮಕ್ಕಳನ್ನು ಸುರಕ್ಷಿತವಾಗಿ ಒಪ್ಪಿಸಿದ್ದರ ಬಗ್ಗೆೆ ಕರ್ನಾಟಕದ ಮಕ್ಕಳ ಕಲ್ಯಾಣ ಸಮಿತಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಮಕ್ಕಳನ್ನು ಮೇಘಾಲಯ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ ಬಳಿಕ ಅವರ ಪೋಷಕರನ್ನು ಪತ್ತೆಹಚ್ಚಿ, ಪರಿಶೀಲನೆ ನಡೆಸಿ, ಅವರ ಸುಪರ್ದಿಗೆ ಒಪ್ಪಿಸುವುದು ಆ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಯ ಜವಾಬ್ದಾರಿ ಆಗಿರಲಿದೆ. ಮೇಘಾಲಯ ರಾಜ್ಯದಲ್ಲಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವ ವೇಳೆ ಅರ್ಜಿದಾರರ ಪರ ವಕೀಲರು ಹಾಜರಿರಬಹುದು. ಅಗತ್ಯಬಿದ್ದರೆ ಅರ್ಜಿದಾರರು ಈ ಬಗ್ಗೆ ಹೈಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿದ ಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿತು.


Spread the love
Share:

administrator

Leave a Reply

Your email address will not be published. Required fields are marked *