12 ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿದ್ದ ವ್ಯಕ್ತಿ ಮತಪಟ್ಟಿಯಿಂದ ಔಟ್!

ಕೊಲ್ಕತ್ತಾ: ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ನಿರಾಶ್ರಿತರಾಗಿ ಬಂದಿದ್ದ 97 ವರ್ಷದ ವೃದ್ಧ ಇದುವರೆಗೆ ಒಂದು ಚುನಾವಣೆಯನ್ನೂ ತಪ್ಪಿಸಿಕೊಂಡಿಲ್ಲ; ಆದರೆ ಈ ಬಾರಿ ಮತದಾರರ ಪರಿಷ್ಕೃತ ಪಟ್ಟಿಯಿಂದ ಅವರ ಹೆಸರು ಮಾಯವಾಗಿದೆ. 12 ಚುನಾವಣೆಗಳಲ್ಲಿ ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ 72 ವರ್ಷದ ನಿವೃತ್ತ ಶಿಕ್ಷಕರೊಬ್ಬರ ಹೆಸರೂ ಮತಪಟ್ಟಿಯಲ್ಲಿ ಇಲ್ಲದ ಕಾರಣ ಅವರ ಮತದಾನದ ಹಕ್ಕು ಕೂಡ ಮೊಟಕುಗೊಂಡಿದೆ 68 ವರ್ಷದ ವ್ಯಕ್ತಿಯೊಬ್ಬರು ನ್ಯಾಯಮಂಡಳಿ ಸರದಿಯಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ: ಎಸ್‌ಐಆರ್ ಬಂಗಾಳದಾದ್ಯಂತ ಇಂತಹ ಹಲವು ಅನಾಹುತಗಳನ್ನು ಸೃಷ್ಟಿಸಿದೆ.
ಸಬರ್ಣಬಾಲ ಪೊದ್ದಾರ್ ಅವಿಭಜಿತ ಬಂಗಾಳದಲ್ಲಿ ಹುಟ್ಟಿದ್ದು 1947ರಲ್ಲಿ ಸ್ಥಳಾಂತರಗೊಂಡರು. ಆ ಬಳಿಕ ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತಿದ್ದರು. ಇದೀಗ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಈ ಬಗ್ಗೆ ಅರಿವು ಇಲ್ಲದ ಅವರು, “ಆರೋಗ್ಯ ಕೈಕೊಡದಿದ್ದರೆ ನಾನು ಮತ ಚಲಾಯಿಸುತ್ತೇನೆ” ಎಂದು ಹೇಳಿದ್ದಾರೆ. ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, “ನನ್ನ ಬಳಿ ಮತದಾರರ ಗುರುತಿನ ಚೀಟಿ ಇದೆ. ನಾನು ಏಕೆ ಮತ ಚಲಾಯಿಸಬಾರದು?” ಎಂದು ಮರುಪ್ರಶ್ನಿಸಿದ್ದಾರೆ.
ಕೊಲ್ಕತ್ತಾದ ನರ್ಕೆಲ್ಲಂಗಾ ಪ್ರದೇಶದಲ್ಲಿ ವಾಸವಿರುವ ವೃದ್ಧೆ ಈ ಮೊದಲು ಮನೆಯಿಂದಲೇ ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಮತದಾರರ ಗುರುತಿನ ಚೀಟಿ, ಆಧಾರ್, ಪಾಸ್‌ಬುಕ್ ಮತ್ತು ವಿಧವಾ ಪಿಂಚಣಿ ದಾಖಲೆಗಳನ್ನು ಸಲ್ಲಿಸಿದರೂ ಸಾಧ್ಯವಾಗಿಲ್ಲ: ಕಾರಣ 2002ರ ಮತದಾರರ ಪಟ್ಟಿಯಲ್ಲಿ ಸ್ವರ್ಣಬಾಲಾ’ ಎಂದು ಇರುವುದರಿಂದ ಅವರ ಕ್ಷೇಮ್ ತಿರಸ್ಕರಿಸಲಾಗಿದೆ. ಫಾರ್ಮ್ 6 ಮೂಲಕ ಹೊಸ ಸೇರ್ಪಡೆಯೂ ಸಾಧ್ಯವಾಗಿಲ್ಲ. ಕುಟುಂಬದ ಎಂಟು ಮಂದಿಯಲ್ಲಿ ನಾಲ್ಕು ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ. ಇಬ್ಬರು ಮೊಮ್ಮಕ್ಕಳು ಸೇರಿ ನಾಲ್ಕು ಮಂದಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಮತಗಟ್ಟೆಯ ಮತದಾರರ ಸಂಖ್ಯೆ 1326ರಿಂದ 1092ಕ್ಕೆ ಇಳಿದಿದೆ ಎಂದು ಟಿಎಂಸಿ ಮತಗಟ್ಟೆ ಏಜೆಂಟ್ ತಿಳಿಸಿದ್ದಾರೆ.
ಹೂಗ್ಲಿಯ ನಿವೃತ್ತ ಶಿಕ್ಷಕ ಎಸ್. ಅಶ್ರಫುಲ್ ಹಕ್ 12 ಚುನಾವಣೆಗಳಲ್ಲಿ ಮತಗಟ್ಟೆಯ ಅಧ್ಯಕ್ಷೀಯ ಅಧಿಕಾರಿಯಾಗಿದ್ದರು. ಅವರ ಕುಟುಂಬದ ಸದಸ್ಯರ ಹೆಸರು ಮತಪಟ್ಟಿಯಲ್ಲಿದ್ದರೂ, ಅವರ ಹೆಸರು ಮಾಯವಾಗಿದೆ. ಅವರು ಪಾಸ್‌ಪೋರ್ಟ್, ಭೂದಾಖಲೆ, ಆಧಾರ್ ಮತ್ತು ಬ್ಯಾಂಕ್ ದಾಖಲೆಗಳನ್ನು ಸಲ್ಲಿಸಿದ್ದಾರೆ. ತಲೆಮಾರುಗಳಿಂದ ನಾನು ಇಲ್ಲಿ ವಾಸವಿದ್ದೇನೆ. 1944ರಿಂದೀಚಿನ ಭೂದಾಖಲೆಗಳಿವೆ. 1956ರ ಮತಪಟ್ಟಿ ನನ್ನ ಪೋಷಕರ ಹೆಸರು ಇರುವ ದಾಖಲೆಗಳೂ ಇವೆ. 2002ರ ಮತಪಟ್ಟಿಯಲ್ಲಿ ನನ್ನ ಹೆಸರಿದೆ. ಆದಾಗ್ಯೂ ವಿಚಾರಣೆಗೆ ಕರೆಯಲಾಗಿದೆ. ನೋಟಿಸ್‌ನಲ್ಲಿ ನಿರ್ದಿಷ್ಟ ಕಾರಣ ನೀಡಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ನಾದಿಯಾ ಜಿಲ್ಲೆಯ ರಾಣಘಾಟ್‌ನಲ್ಲಿ ಎಸ್‌ಡಿಓ ಕಚೇರಿ ಮುಂದೆ ಮತಪಟ್ಟಿ ಪರಿಷ್ಕರಣೆ ಸರದಿಯಲ್ಲಿ ನಿಂತಿದ್ದ ಜೀಬನಕೃಷ್ಣ ಬಿಸ್ವಾಸ್ ಕುಸಿದು ಬಿದ್ದು ಮೃತಪಟ್ಟ ಘಟನೆಯೂ ನಡೆದಿದೆ.
