ಮೂರು ವರ್ಷ ಫ್ಲಾಟ್‌ನಲ್ಲೇ ತನ್ನನ್ನೇ ತಾನು ಕೂಡಿಹಾಕಿಕೊಂಡ ವ್ಯಕ್ತಿ

ಮುಂಬೈ:ಏಕಾಂಗಿತನ, ಖಿನ್ನತೆ ಹಾಗೂ ಅಪನಂಬಿಕೆಗೆ ಈಡಾಗಿದ್ದ 55 ವರ್ಷದ ವ್ಯಕ್ತಿಯೊಬ್ಬರು, ಮೂರು ವರ್ಷಗಳ ಕಾಲ ತಮ್ಮನ್ನು ತಾವೇ ತಮ್ಮ ಫ್ಲ್ಯಾಟ್ ನಲ್ಲಿ ಕೂಡಿ ಹಾಕಿಕೊಂಡಿದ್ದ ಆಘಾತಕಾರಿ ಘಟನೆ ನವಿ ಮುಂಬೈನಿಂದ ಬೆಳಕಿಗೆ ಬಂದಿದೆ.

ಮಾನಸಿಕ ಖಿನ್ನತೆಗೊಳಗಾಗಿದ್ದ ಈ ವ್ಯಕ್ತಿಯನ್ನು ಜುಯ್ನಾನಗರ್ ನಿವಾಸಿ ಅನೂಪ್ ಕುಮಾರ್ ನಾಯರ್ ಎಂದು ಗುರುತಿಸಲಾಗಿದ್ದು, ಆಹಾರವನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡುವ ಮೂಲಕ ಮಾತ್ರ ಅವರು ಹೊರ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ನಾಯರ್ ಪರಿಸ್ಥಿತಿಯ ಕುರಿತು ಹಿತೈಷಿಯೊಬ್ಬರಿಂದ ಕರೆ ಸ್ವೀಕರಿಸಿದ ಬೆನ್ನಿಗೇ, ಸೋಷಿಯಲ್ ಆಯಂಡ್ ಎವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ (SEAL) ಸಂಘಟನೆಯ ಸಾಮಾಜಿಕ ಕಾರ್ಯಕರ್ತರು ಘಾರ್ಕೂಲ್ ಸಿಎಚ್‌ಎಸ್ ಸೆಕ್ಟರ್ 24ರಲ್ಲಿರುವ ಅನೂಪ್ ಕುಮಾರ್ ನಾಯರ್ ವಾಸಿಸುತ್ತಿರುವ ಫ್ಲ್ಯಾಟ್ ಗೆ ಧಾವಿಸಿ, ಅವರ ಮನೆಯ ಬಾಗಿಲನ್ನು ಮುರಿದು, ಅಸ್ತವ್ಯಸ್ತಗೊಂಡಿದ್ದ ಅವರ ಅಪಾರ್ಟ್ ಮೆಂಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಯರ್ ಏಕಾಂಗಿಯಾಗಿ ವಾಸಿಸುತ್ತಿದ್ದ ಫ್ಲ್ಯಾಟ್ ನಲ್ಲಿ ಮಲಮೂತ್ರ ವಿಸರ್ಜನೆಗಳು ತುಂಬಿರುವುದು ಕಂಡು ಬಂದಿದೆ.
ನಾಯರ್ ಅವರ ತಾಯಿ ಪೊನ್ನಮ್ಮ ನಾಯರ್ ಭಾರತೀಯ ವಾಯುಪಡೆಯ ದೂರಸಂಪರ್ಕ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಅವರ ತಂದೆ ವಿ.ಪಿ.ಕುಟ್ಟಿ ಕೃಷ್ಣನ್ ನಾಯರ್ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು.
ಆದರೆ, ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರಿಬ್ಬರೂ ತೀರಿ ಹೋಗಿದ್ದರಿಂದ ಹಾಗೂ ತಮ್ಮ ಸಹೋದರ 20 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ನಾಯರ್, ತಮ್ಮ ಫ್ಲ್ಯಾಟ್ ನಿಂದ ಹೊರ ಬರಲು ನಿರಾಕರಿಸುತ್ತಿದ್ದರು ಎಂದು ಸೋಷಿಯಲ್ ಆಯಂಡ್ ಎವಾಜೆಲಿಕಲ್ ಅಸೋಸಿಯೇಷನ್ ಫಾರ್ ಲವ್ ಸದ್ಯ ಪನ್ವೇಲ್ ರಕ್ಷಣಾ ಕೇಂದ್ರದಲ್ಲಿರುವ ನಾಯರ್ ಅವರನ್ನು ಸಂಪರ್ಕಿಸಿದಾಗ, “ಸದ್ಯ ನನಗ್ಯಾವ ಸ್ನೇಹಿತರೂ ಇಲ್ಲ ಹಾಗೂ ನನ್ನ ಪೋಷಕರು ಮತ್ತು ಸಹೋದರ ಈಗಾಗಲೇ ಮೃತಪಟ್ಟಿದ್ದಾರೆ. ನನ್ನ ಆರೋಗ್ಯ ಹದಗೆಟ್ಟಿರುವುದರಿಂದ, ನಾನು ಯಾವುದೇ ಹೊಸ ಉದ್ಯೋಗ ಹುಡುಕಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
