ಬ್ಲ್ಯಾಕ್ ಸ್ಟಿಕ್ಕರ್‌ನಿಂದ ನಂಬರ್ ಪ್ಲೇಟ್ ಮರೆಮಾಚಿ ಪೊಲೀಸರನ್ನೇ ಯಾಮಾರಿಸಲು ಯತ್ನ: ಮೈಸೂರಿನಲ್ಲಿ ವ್ಯಕ್ತಿ ಬಂಧನ

ಮೈಸೂರು: ಆಕ್ಟಿವಾ ಸ್ಕೂಟರ್ ನ ನೊಂದಣಿ ಸಂಖ್ಯೆಯ ಕೊನೆ ನಂಬರ್ ಗೆ ಕಪ್ಪು ಸ್ಟಿಕ್ಕರ್ ಅಂಟಿಸಿ ಸಂಚಾರಿ ಪೊಲೀಸರನ್ನ ಯಾಮಾರಿಸುತ್ತಿದ್ದ ಭೂಪ ಸಿಕ್ಕಿಬಿದ್ದಿದ್ದಾನೆ.

ವಿವಿಪುರಂ ಸಂಚಾರಿ ಪೊಲೀಸರು ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಸಂಚಾರಿಪೊಲೀಸರು ವಾಹನ ವಶಪಡಿಸಿಕೊಂಡಿದ್ದು ಆರೋಪಿ ಸಮೇತ ವಿವಿಪುರಂ ಠಾಣೆಗೆ ಒಪ್ಪಿಸಿದ್ದಾರೆ.
ಬೆಲವತ್ತ ಗ್ರಾಮದ ವಸಂತ್ ಎಂಬಾತನೇ ಸಿಕ್ಕಿಬಿದ್ದ ಭೂಪ.
ಆಕ್ಟೀವಾ ಸ್ಕೂಟರ್ ನೊಂದಣಿ KA09 JY6046 ಸಂಖ್ಯೆಯ ಕೊನೆ ನಂಬರ್ 6 ರ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ ಓಡಾಡುತ್ತಿದ್ದ. ವಿವಿ ಪುರಂ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಬರೀಶ್ ರವರು ಬಿಸಿ ಲಿಂಗಯ್ಯ ವೃತ್ತದ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ವಸಂತ್ ಆಕ್ಟಿವಾದಲ್ಲಿ ಸಾಗಿದ್ದಾನೆ.
ಕೊನೆ ನಂಬರ್ ಮೇಲೆ ಸ್ಟಿಕ್ಕರ್ ಅಂಟಿಸಿರುವುದನ್ನ ಖಚಿತಪಡಿಸಿಕೊಂಡ ಶಬರೀಶ್ ಚೇಸ್ ಮಾಡಿ ಹಿಡಿದಿದ್ದಾರೆ. ಸ್ಟಿಕ್ಕರ್ ತೆಗೆದಾಗ ಕೊನೆ ನಂಬರ್ 6 ನ್ನ ಮುಚ್ಚಿರುವುದು ಬೆಳಕಿಗೆ ಬಂದಿದೆ. ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಸಿಕ್ಕಿಬೀಳಬಾರದೆಂಬ ಉದ್ದೇಶದಿಂದ ಸ್ಟಿಕ್ಕರ್ ಅಂಟಿಸಿರುವುದಾಗಿ ವಸಂತ್ ಪೊಲೀಸರ ಮುಂದೆ ತಿಳಿಸಿದ್ದಾನೆ. ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
