ಮದ್ಯದ ಅಮಲಿನಲ್ಲಿ ಅಪರಾಧ ಒಪ್ಪಿಕೊಂಡ ವ್ಯಕ್ತಿ, ಗುಂಪು ಹಲ್ಲೆಯಿಂದ ಸಾವು: ಛತ್ತೀಸ್ಗಢದಲ್ಲಿ ಘಟನೆ

ರಾಯಪುರ: ಸಂಬಂಧಿಕರ ಕುಟುಂಬದ ಮಗುವನ್ನು ಹತ್ಯೆ ಮಾಡಿದ್ದಾಗಿ ಪಾನಮತ್ತ ಸ್ಥಿತಿಯಲ್ಲಿ ಒಪ್ಪಿಕೊಂಡ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿಸಿ ಥಳಿಸಿ ಹತ್ಯೆ ಮಾಡಿದ ಘಟನೆ ಛತ್ತೀಸ್ಗಢದ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಆದರೆ 2019ರ ಈ ಪ್ರಕರಣದಲ್ಲಿ ಬಾಲಾಪರಾಧಿಯೊಬ್ಬ ಮಗುವನ್ನು ಹತ್ಯೆ ಮಾಡಿರುವುದು ದೃಢಪಟ್ಟಿದ್ದು, ಆತ ಇದೀಗ ಸುಧಾರಣಾ ಗೃಹದಲ್ಲಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ವ್ಯಕ್ತಿ ಮದ್ಯಪಾನ ಮಾಡಿದ ಅಮಲಿನಲ್ಲಿ ಹೇಳಿಕೆ ನೀಡಿದ್ದರಿಂದ ಕೋಪಗೊಂಡ ಶಕ್ತಿ ಜಿಲ್ಲೆಯ ದರ್ರಾಬಾತಾ ಗ್ರಾಮಸ್ಥರು ಆತನನ್ನು ಹಿಡಿದು ವಿವಸ್ತ್ರಗೊಳಿಸಿ, ಬಡಿಗೆ, ರಾಡ್ ಗಳಿಂದ ಹೊಡೆದು ತುಳಿದು ಸಾಯಿಸಿದ್ದಾರೆ. ಮೃತ ಸುರ್ವೆದಾಸ್ ಮಹಾಂತನ ವಿರುದ್ಧ 12 ಮುನ್ನೆಚ್ಚರಿಕೆ ಅಪರಾಧ ಪ್ರಕರಣಗಳು ಇದ್ದವು.
ಗುಂಪು ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ತಂದೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ ತಂದೆಯ ತಲೆಗೆ ಗಂಭೀರ ಗಾಯಗಳಾಗಿದ್ದವು ಎಂದು ಮೃತ ವ್ಯಕ್ತಿಯ ಪುತ್ರ ಹೇಳಿಕೆ ನೀಡಿದ್ದಾರೆ.
ಗ್ರಾಮದಲ್ಲಿ ಮಂಗಳವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಒಂಬತ್ತು ಮಂದಿಯನ್ನು ಬಂಧಿಸಿದ್ದು, ಹತ್ಯೆ ಪ್ರಕರಣ ದಾಖಲಿಸಿದ್ದಾರೆ.
“ರವಿವಾರ ಸಂಜೆ ಮನೆಗೆ ಬಂದಾಗ ಸಂತ್ರಸ್ತ ವ್ಯಕ್ತಿ ಪಾನಮತ್ತ ಸ್ಥಿತಿಯಲ್ಲಿದ್ದ. ಕೊಳವೆಬಾವಿಯಿಂದ ನೀರು ತೆಗೆಯುವ ವಿಚಾರದಲ್ಲಿ ಮಹಿಳೆಯೊಬ್ಬರ ಜತೆ ಜಗಳ ಆರಂಭಿಸಿದ. ಸಂಬಂಧಿಕರಾದರೂ ಪಂಚಾಯ್ತಿ ಚುನಾವಣೆಯಲ್ಲಿ ತನಗೆ ಮತ ಹಾಕಿಲ್ಲ ಎಂದು ಆಪಾದಿಸಿದ್ದ” ಎಂದು ಬಿಲಾಸ್ಪುರ ವಲಯದ ಐಪಿಜಿ ಸಂಜೀವ್ ಶುಕ್ಲಾ ಹೇಳಿದ್ದಾರೆ. 2019ರಲ್ಲಿ ಈ ಕುಟುಂಬದ ಆರು ವರ್ಷದ ಮಗುವನ್ನು ತಾನೇ ಹತ್ಯೆ ಮಾಡಿದ್ದಾಗಿ ಹೇಳಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ವಿವರಿಸಿದ್ದಾರೆ.