ಮುಂಬೈ ನೌಕಾ ನೆಲೆಯಲ್ಲಿ ಭಾರಿ ಭದ್ರತಾ ಲೋಪ: ರೈಫಲ್ ಮತ್ತು ಮದ್ದುಗುಂಡುಗಳೊಂದಿಗೆ ವ್ಯಕ್ತಿ ನಾಪತ್ತೆ

ಮುಂಬೈ: ಮುಂಬೈನ ನೌಕಾ ನೆಲೆಯಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ನೌಕಾ ಸಿಬ್ಬಂದಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ರೈಫಲ್ ಮತ್ತು ಸ್ಫೋಟಕಗಳೊಂದಿಗೆ ಪರಾರಿಯಾಗಿದ್ದಾನೆ.

ದಕ್ಷಿಣ ಮುಂಬೈನ ಕೊಲಾಬಾದಲ್ಲಿನ ನೌಕಾಪಡೆಯ ವಸತಿ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ.
ಕಿರಿಯ ಸಿಬ್ಬಂದಿಯೊಬ್ಬರು ತಮ್ಮ ಕೆಲಸವನ್ನು ನೌಕಾಪಡೆಯ ಸಮವಸ್ತ್ರದಲ್ಲಿದ್ದ ವ್ಯಕ್ತಿಗೆ ವಹಿಸಿದ್ದರು. ಕೆಲಸ ವಹಿಸಿಕೊಂಡಿದ್ದ ವ್ಯಕ್ತಿ ಐಎನ್‌ಎಸ್‌ಎಸ್ ರೈಫಲ್ ಮತ್ತು ಮದ್ದುಗುಂಡುಗಳೊಂದಿಗೆ ನಾಪತ್ತೆಯಾಗಿದ್ದಾನೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ವಿವಿಧ ಕೇಂದ್ರೀಯ ತನಿಖಾ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ತನಿಖೆ ಆರಂಭಿಸಿವೆ.
