ಜೋಗೇಶ್ವರಿ ಜೆಎಂಎಸ್ ಬಿಸಿನೆಸ್ ಸೆಂಟರ್ನಲ್ಲಿ ಭಾರಿ ಅಗ್ನಿ ಅವಘಡ; ಕಟ್ಟಡದ ಮೇಲೆ ಸಿಲುಕಿದ್ದ 5 ಜನರ ರಕ್ಷಣೆ

ಮುಂಬಯಿ: ಜೋಗೇಶ್ವರಿ ಪ್ರದೇಶದಲ್ಲಿರುವ ಜೆಎಂಎಸ್ ಬಿಸಿನೆಸ್ ಸೆಂಟರ್ನಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದ ಮೇಲಿನ ಮಹಡಿಯಲ್ಲಿ ಹಲವು ಮಂದಿ ಸಿಲುಕಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಿದರು. ಏಣಿಗಳ ಸಹಾಯದಿಂದ ಕಟ್ಟಡದ ಮೇಲೆ ಸಿಲುಕಿಕೊಂಡ ಐದು ಜನರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು ಎನ್ನಲಾಗಿದೆ.
ಹಂತ-II ತುರ್ತುಸ್ಥಿತಿ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಘೋಷಿಸಿದೆ. ಇದರ ಅರ್ಥ ಬೆಂಕಿ ದೊಡ್ಡ ಪ್ರಮಾಣದಲ್ಲಿದೆ ಮತ್ತು ಅದನ್ನು ಹತೋಟಿಗೆ ತರಲು ಹೆಚ್ಚಿನ ಸಂಪನ್ಮೂಲಗಳು ಬೇಕಾಗುತ್ತವೆ ಎನ್ನುವುದು. ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ಮುಂಬಯಿಯಲ್ಲಿ ನಾಲ್ವರು ಮೃತ
ಸೋಮವಾರ ದೀಪಾವಳಿ ಹಬ್ಬದ ದಿನವಾದ(ಅ.20)ರಂದು ಮಧ್ಯರಾತ್ರಿ ನವಿ ಮುಂಬೈನ ವಾಶಿಯಲ್ಲಿರುವ 12 ಅಂತಸ್ತಿನ ‘ರಹೇಜಾ ರೆಸಿಡೆನ್ಸಿ’ಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಇದರಿಂದ ನಾಲ್ವರು ಮೃತಪಟ್ಟಿದ್ದರು. ಮೃತರನ್ನು ಸುಂದರ್ ಬಾಲಕೃಷ್ಣನ್ (44), ಅವರ ಪತ್ನಿ ಪೂಜಾ ರಾಜನ್ (39), ಮತ್ತು ಅವರ ಆರು ವರ್ಷದ ಮಗಳು ವೇದಿಕಾ ಹಾಗೂ 84 ವರ್ಷದ ಕಮಲಾ ಜೈನ್ ಎಂದು ಗುರುತಿಸಲಾಗಿದೆ.
ರಹೇಜಾ ಅಪಾರ್ಟ್ಮೆಂಟ್ನಲ್ಲಿ ಹೊತ್ತಿಕೊಂಡ ಬೆಂಕಿ 10ನೇ ಮಹಡಿಯಲ್ಲಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ 11 ಮತ್ತು 12ನೇ ಮಹಡಿಗಳಿಗೂ ವ್ಯಾಪಿಸಿತ್ತು. ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದ ಇತರ 10 ನಿವಾಸಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯುತ್ ಸುರಕ್ಷತಾ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದ ನಂತರವೇ ಬೆಂಕಿಗೆ ನಿಖರ ಕಾರಣ ತಿಳಿಯಲಿದೆ ಎಂದು ವಾಶಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಶಶಿಕಾಂತ್ ಚಂದೇಕರ್ ಹೇಳಿದ್ದಾರೆ.