ಸಿಬಿಐಗೆ ತೀವ್ರ ಮುಖಭಂಗ: ‘ಬಾಲ್’ ಗೊಂದಲ, ಮಸುಕಾದ ಚಿತ್ರ – ಸಾರ್ವಜನಿಕ ಜಾಹೀರಾತು ವೈರಲ್!

ಹೊಸದಿಲ್ಲಿ: ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ದಳ(ಸಿಬಿಐ)ವು ಕ್ರಿಮಿನಲ್ ಪ್ರಕರಣವೊಂದರಲ್ಲಿ ಬೇಕಾಗಿರುವ ಮೂವರು ಆರೋಪಿಗಳ ಕುರಿತು ಮಾಹಿತಿಗಳನ್ನು ಕೋರಿ ಸಾರ್ವಜನಿಕ ಜಾಹೀರಾತನ್ನು ಪ್ರಕಟಿಸಿದ ಬಳಿಕ ತೀವ್ರ ಟೀಕೆಗಳಿಗೆ ತುತ್ತಾಗಿದೆ. ಈ ಜಾಹೀರಾತು ತನ್ನ ಉದ್ದೇಶವನ್ನು ಪೂರೈಸುವ ಬದಲು ಸಂಸ್ಥೆಯ ವೃತ್ತಿಪರತೆ ಬಗ್ಗೆ ಅಪಹಾಸ್ಯಕ್ಕೆ ಕಾರಣವಾಗಿದೆ ಮತ್ತು ಕಳವಳಗಳನ್ನು ಹುಟ್ಟುಹಾಕಿದೆ.

ಮೂವರು ನೈಜೀರಿಯನ್ ಪ್ರಜೆಗಳಾದ ಡೊಸುನ್ಮು ಒಲುವಾಟೊಸಿನ್,ಸನ್ನಿ ಅಮಿನತ್ ಒಲಾಕುಮೋಕೆ ಮತ್ತು ಅಡೆನೊವೊ ಅಡೆಕುನ್ಲೆ ಅಜೀಜ್ ಅವರ ಕುರಿತು ಮಾಹಿತಿಗಾಗಿ ಸಾರ್ವಜನಿಕರನ್ನು ಕೋರಿಕೊಂಡಿರುವ ಈ ಜಾಹೀರಾತು ಎದ್ದುಕಾಣುವ ದೋಷಗಳು ಮತ್ತು ಕಳಪೆತನದಿಂದಾಗಿ ಟೀಕೆಗೆ ಗುರಿಯಾಗಿದೆ.
ತನ್ನ ಯೂಟ್ಯೂಬ್ ಚಾನೆಲ್ ‘ರೆಡ್ ಮೈಕ್’ನಲ್ಲಿ ಜಾಹೀರಾತನ್ನು ಟೀಕಿಸಿರುವ ಪತ್ರಕರ್ತ ಸಂಕೇತ ಉಪಾಧ್ಯಾಯ ಅವರು ಇಂತಹ ನೋಟಿಸ್ಗಳನ್ನು ಯಾರು ಸಿದ್ಧಪಡಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಆರೋಪಿಗಳ ಮಸುಕಾಗಿರುವ ಚಿತ್ರಗಳನ್ನು ತೋರಿಸಿರುವ ಅವರು, ಬಹುಮಾನವನ್ನು ಪಡೆಯಲು ಜನರು ಕನಿಷ್ಠ ಚಿತ್ರಗಳನ್ನು ನೋಡಲಾದರೂ ಸಾಧ್ಯವಾಗಬೇಕು ಎಂದು ಬೆಟ್ಟು ಮಾಡಿದ್ದಾರೆ.

ಜಾಹೀರಾತಿನಲ್ಲಿ ಅತ್ಯಂತ ಸ್ಪಷ್ಟವಾಗಿರುವ ತಪ್ಪು ಇಲ್ಲಿದೆ;’ಬೇಲ್(ಜಾಮೀನು)’ ಪದವನ್ನು ಪದೇ ಪದೇ ‘ಬಾಲ್(ಚೆಂಡು) ಎಂದು ತಪ್ಪಾಗಿ ಬರೆಯಲಾಗಿದೆ. ‘ಬಾಲ್’ಮಂಜೂರು ಮಾಡಿದ ಬಳಿಕ ಅವರು’ಬಾಲ್’ನ್ನು ಉಲ್ಲಂಘಿಸಿದ್ದಾರೆ ಮತ್ತು ಪರಾರಿಯಾಗಿದ್ದಾರೆ ಎಂದು ಬರೆಯಲಾಗಿದ್ದು,ಈ ಭಾಷಾದೋಷ ಎಲ್ಲರ ಗಮನವನ್ನು ಸೆಳೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಭಾಷಾ ನಿರ್ಲಕ್ಷ್ಯಕ್ಕಾಗಿ ಸಿಬಿಐ ಅನ್ನು ಅಪಹಾಸ್ಯ ಮಾಡುತ್ತಿದ್ದಾರೆ.
ಕಾಗುಣಿತ ದೋಷದ ಜೊತೆಗೆ ಜಾಹೀರಾತಿನಲ್ಲಿ ಪ್ರಕಟಿಸಿರುವ ಆರೋಪಿಗಳ ಚಿತ್ರಗಳನ್ನು ಗುರುತಿಸಲು ಸಾಧ್ಯವೇ ಇಲ್ಲ. ಅಷ್ಟು ಮಸುಕಾಗಿರುವ ಚಿತ್ರಗಳನ್ನು ಪ್ರಕಟಿಸಿ ಸಿಬಿಐ ಅವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಿಕೊಂಡಿದೆ! ಇದು ಸಿಬಿಐ ಜಾಹೀರಾತೇ ಅಥವಾ ತಮಾಷೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಮೂವರು ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ತಲಾ 50,000 ರೂ.ಗಳ ಬಹುಮಾನವನ್ನು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. 2009ರಲ್ಲಿ ಸಿಬಿಐನ ಆರ್ಥಿಕ ಅಪರಾಧಗಳ ಘಟಕವು ದಾಖಲಿಸಿಕೊಂಡ ಪ್ರಕರಣದಲ್ಲಿ ಈ ಮೂವರು ಆರೋಪಿಗಳಾಗಿದ್ದಾರೆ. ಸಿಬಿಐ ಪ್ರಕಾರ ಅವರಿಗೆ ಜಾಮೀನು ಮಂಜೂರು ಮಾಡಲಾಗಿದ್ದು ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ. ದಿಲ್ಲಿಯ ನ್ಯಾಯಾಲಯವೊಂದು ಅವರನ್ನು’ಘೋಷಿತ ಅಪರಾಧಿ’ಗಳು ಎಂದು ಘೋಷಿಸಿದೆ.
ಆರೋಪಿಗಳ ಕುರಿತು ಯಾವುದೇ ಸುಳಿವುಗಳನ್ನು ಹಂಚಿಕೊಳ್ಳುವಂತೆ ಸಿಬಿಐ ಸಾರ್ವಜನಿಕರನ್ನು ಆಗ್ರಹಿಸುತ್ತಿದ್ದರೂ,ಅದು ಮೊದಲು ತನ್ನ ಜಾಹೀರಾತುಗಳು ನಿಖರ,ಸ್ಪಷ್ಟ ಮತ್ತು ವೃತ್ತಿಪರವಾಗಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಟೀಕಾಕಾರರು ಕುಟುಕಿದ್ದಾರೆ.
ಜಾಹೀರಾತಿಗೆ ಸಂಬಂಧಿಸಿದಂತೆ ಸಿಬಿಐ ಈವರೆಗೆ ಯಾವುದೇ ಸ್ಪಷ್ಟನೆ ಅಥವಾ ತಿದ್ದುಪಡಿಯನ್ನು ಹೊರಡಿಸಿಲ್ಲ.
