ಮಹತ್ವದ ನಿರ್ಣಯ: ಕೊಂಕಣ್ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾಗಲಿದೆ

ಮಹಾರಾಷ್ಟ್ರ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರ್ಕಾರವು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡಿದೆ. ಗೋವಾ, ಕರ್ನಾಟಕ ಮತ್ತು ಕೇರಳ ಈಗಾಗಲೇ ವಿಲೀನವನ್ನು ಅನುಮೋದಿಸಿರುವುದರಿಂದ, ಮಹಾರಾಷ್ಟ್ರದ ಈ ಅನುಮೋದನೆಯಿಂದಾಗಿ 741 ಕಿ.ಮೀ ಸುಂದರವಾದ ಕರಾವಳಿ ಮಾರ್ಗವನ್ನು ರಾಷ್ಟ್ರೀಯ ರೈಲ್ವೆಯಲ್ಲಿ ವಿಲೀನವಾಗುತ್ತಿದೆ.
ಕೊಂಕಣ ರೈಲ್ವೆ ಎಂದರೇನು?
1990ರಲ್ಲಿ ರೈಲ್ವೆ ಸಚಿವಾಲಯದ ಅಡಿಯಲ್ಲಿ ವಿಶೇಷ ಉದ್ದೇಶಕ್ಕಾಗಿ ಕೊಂಕಣ ರೈಲ್ವೆಗೆ ಪಶ್ಚಿಮ ಘಟ್ಟಗಳ ಸವಾಲಿನ ಭೂಪ್ರದೇಶದ ಮೂಲಕ ರೈಲ್ವೆ ಮಾರ್ಗಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಕೆಲಸ ನೀಡಲಾಗಿತ್ತು. ಜನವರಿ 1998 ರಿಂದ ಅಧಿಕೃತವಾಗಿ ಈ ಮಾರ್ಗಕ್ಕೆ ಚಾಲನೆಯೂ ಸಿಕ್ಕಿತ್ತು. ಈ ಮಾರ್ಗವು ಮಹಾರಾಷ್ಟ್ರದ ರೋಹಾವನ್ನು ಕರ್ನಾಟಕದ ಮಂಗಳೂರಿಗೆ ಸಂಪರ್ಕಿಸುತ್ತದೆ. ಜೊತೆಗೆ ಗೋವಾ ಮೂಲಕ ಹಾದುಹೋಗಿ, ಕೇರಳವನ್ನು ಮುಟ್ಟುತ್ತದೆ. ಇದು ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲ್ವೇಯಾಗಿ ಕಾರ್ಯನಿರ್ವಹಿಸುತ್ತಿ.
KRCL ಜಂಟಿ ಉದ್ಯಮವಾಗಿದ್ದು, ಭಾರತ ಸರ್ಕಾರವು 51% ಪಾಲನ್ನು ಹೊಂದಿದ್ದು, ಮಹಾರಾಷ್ಟ್ರ 22%, ಕರ್ನಾಟಕ 15%, ಗೋವಾ ಮತ್ತು ಕೇರಳ ತಲಾ 6ರಷ್ಟು ಪಾಲನ್ನು ಹೊಂದಿವೆ.
ಈಗ ವಿಲೀನಗೊಳ್ಳುವುದೇಕೆ?
ಇತ್ತೀಚಿನ ವರ್ಷಗಳಲ್ಲಿ KRCL ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ಕಡಿಮೆ ಆದಾಯದಿಂದಾಗಿ ಕೊಂಕಣ್ ರೈಲ್ವೇ ನಷ್ಟದಲ್ಲಿದೆ.
ಈ ವಿಲೀನ ಪ್ರಕ್ರಿಯೆ ಮಧ್ಯೆ ಮಹಾರಾಷ್ಟ್ರವು ಎರಡು ಷರತ್ತು ಹಾಕಿದೆ.
ಷರತ್ತು 1 : ‘ಕೊಂಕಣ ರೈಲ್ವೆ’ ಎಂಬ ಹೆಸರನ್ನು ವಿಲೀನದ ನಂತರ ಉಳಿಸಿಕೊಳ್ಳಬೇಕು
ಷರತ್ತು 2 : ಭಾರತೀಯ ರೈಲ್ವೆ ಆರಂಭದಲ್ಲಿ ಹೂಡಿಕೆಗಾಗಿ ಮಹಾರಾಷ್ಟ್ರಕ್ಕೆ ₹394 ಕೋಟಿ ಪಾವತಿಸಬೇಕು
ಕೇಂದ್ರವು ಎರಡೂ ಷರತ್ತುಗಳಿಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.