Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ಯಾಂಕ್ ಸಾಲದ ಆಮಿಷ: ಉದ್ಯಮಿಗಳಿಂದ ಕೋಟ್ಯಂತರ ರೂ. ವಂಚನೆ, ಮಂಗಳೂರಿನಲ್ಲಿ ಇಡಿ ದಾಳಿ

Spread the love

ಮಂಗಳೂರು: ಬ್ಯಾಂಕ್‌ಗಳಿಂದ ಸಾಲ ಕೊಡಿಸುವುದಾಗಿ ಹೇಳಿ ಕಮಿಷನ್ ರೂಪದಲ್ಲಿ ಕೋಟ್ಯಂತರ ಮೊತ್ತವನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಐದು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೋಧ ಕಾರ್ಯ ಆರಂಭಿಸಿದೆ. ಶೋಧದ ಸಂದರ್ಭದಲ್ಲಿ ಡೈರಿ, ಕಾಗದ ಪತ್ರಗಳು ಸೇರಿದಂತೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಇಡಿ ಮಂಗಳೂರು ಉಪವಲಯ ಕಚೇರಿ ತಿಳಿಸಿದೆ.

ಕಂಕನಾಡಿ ಬೊಲ್ಲಗುಡ್ಡದ ಜಾನ್ ಸಲ್ಡಾನ ಅವರ ಮಗ ರೋಷನ್ ಸಲ್ಡಾನ, ಉದ್ಯಮಿಗಳಿಗೆ ಸಾಲ ಕೊಡಿಸುವ ಆಮಿಷ ಒಡ್ಡಿ ವಂಚನೆ ಮಾಡುತ್ತಿದ್ದ. ಮಂಗಳೂರು ಮತ್ತು ಚಿತ್ರದುರ್ಗದಲ್ಲಿ ದಾಖಲಾದ ದೂರುಗಳ ಆಧಾರದಲ್ಲಿ ಜುಲೈ 17ರಂದು ಆತನ ವೈಭವೋಪೇತ ಬಂಗಲೆ ಮೇಲೆ ದಾಳಿ ನಡೆಸಿದ ನಗರ ಪೊಲೀಸರು ಆತನನ್ನು ಬಂಧಿಸಿದ್ದರು. ನಂತರ ಕಾನೂನು ಜಾರಿ ಏಜೆನ್ಸಿ ಈತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿತ್ತು.

ಕಡಿಮೆ ಬಡ್ಡಿ ದರದಲ್ಲಿ ಕೋಟ್ಯಂತರ ಮೊತ್ತದ ಸಾಲ ಕೊಡಿಸುವುದಾಗಿ ಹೇಳಿ ಕಮಿಷನ್ ಮತ್ತು ಸ್ಟ್ಯಾಂಪ್ ಡ್ಯೂಟಿ ನೆಪದಲ್ಲಿ ಹಲವು ಉದ್ಯಮಿಗಳಿಂದ ಅಂದಾಜು ₹ 39 ಕೋಟಿ ಮೊತ್ತವನ್ನು ರೋಷನ್‌, ಡಾಫ್ನಿ ಮತ್ತು ಇತರರು ಪಡೆದುಕೊಂಡು ವಂಚಿಸಿದ್ದಾರೆ. ಐಶಾರಾಮಿ ಜೀವನ ನಡೆಸುತ್ತಿದ್ದ ರೋಷನ್ ಉದ್ಯಮಿಗಳನ್ನು ಮನೆಗೆ ಕರೆಸಿ ಸತ್ಕರಿಸುತ್ತಿದ್ದ ಎಂದೂ ತಿಳಿದುಬಂದಿತ್ತು.

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಶೋಧ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿ ₹ 3.75 ಕೋಟಿ ಮೊತ್ತ ಪತ್ತೆಯಾಗಿತ್ತು. ₹ 5.75 ಕೋಟಿ ಮೊತ್ತದಲ್ಲಿ ಪತ್ನಿಯ ಹೆಸರಿನಲ್ಲಿ 5 ಮೀನುಗಾರಿಕಾ ಬೋಟ್‌ಗಳನ್ನು ಖರೀದಿಸಿರುವುದೂ ಪತ್ತೆಯಾಗಿದೆ. ಈ ಬೋಟ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಮಂಗಳೂರು ಪೊಲೀಸರು ರೋಷನ್‌ನ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಿದೇಶಿ-ದೇಶಿ ಮದ್ಯದ ಬಾಟಲಿಗಳನ್ನು ಒಳಗೊಂಡ ಮಿನಿ ಬಾರ್, ಚಿನ್ನದ ಲೇಪ ಇರುವಂತೆ ಗೋಚರಿಸುವ ಆಸನಗಳು, ಶೋಕಿಗಾಗಿ ಬಳಸಿದ ಬಗೆಬಗೆಯ ನವನವೀನ ಆಲಂಕಾರಿಕ ವಸ್ತುಗಳು ಮತ್ತು ನಿಗೂಢ ಅಡಗುತಾಣವನ್ನು ಪತ್ತೆ ಮಾಡಿದ್ದರು.

667 ಗ್ರಾಂ ಚಿನ್ನದ ಆಭರಣಗಳು, ₹ 2.75 ಕೋಟಿ ಮೊತ್ತದ ವಜ್ರದ ಉಂಗುರ, ₹ 6 ಲಕ್ಷ 72 ಸಾವಿರ ಬೆಲೆಬಾಳುವ ಮದ್ಯವನ್ನೂ ವಶಪಡಿಸಿಕೊಳ್ಳಲಾಗಿತ್ತು. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯದ ದಾಸ್ತಾನು ಇರಿಸಿದ್ದಕ್ಕಾಗಿ ಅಬಕಾರಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಮನೆಯನ್ನೇ ಆತ ಹಣಕಾಸು ವ್ಯವಹಾರದ ಅಡ್ಡೆಯನ್ನಾಗಿಸಿಕೊಂಡಿದ್ದ. ಬೆಂಗಳೂರು, ವಿಜಯಪುರ, ತುಮಕೂರು, ಬಾಗಲಕೋಟೆ, ಕೋಲ್ಕತ್ತ, ಗೋವಾ, ಪುಣೆ, ಲಖನೌ, ಸಾಂಗ್ಲಿ ಮುಂತಾದ ಕಡೆಗಳಲ್ಲಿ ಆತ ವಂಚನೆ ಮಾಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದರು.


Spread the love
Share:

administrator

Leave a Reply

Your email address will not be published. Required fields are marked *