ಲಕ್ಕಿ ಗರ್ಲ್ ಸಿಂಡ್ರೋಮ್: ನಿಜವಾಗಿಯೂ ಅದೃಷ್ಟವೋ ಅಥವಾ ಮಾನಸಿಕ ಒತ್ತಡವೋ?

ಡಿಜಿಟಲ್ ಯುಗದಲ್ಲಿ ಬದುಕುತ್ತಿರುವ ನಾವು ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡ್ ನೋಡುವುದು ಸಾಮಾನ್ಯ. ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ಅನುಸರಿಸುತ್ತಾರೆ ಕೂಡ. ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳು ಕೆಲವೊಬ್ಬರ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ.

ಈ ಟ್ರೆಂಡ್‌ನಿಂದ ಅವರ ಬದುಕಿನ ಶೈಲಿ ಬದಲಾದರೂ ಕೂಡ ಆಶ್ಚರ್ಯವಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡು ಜನರ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಟ್ರೆಂಡ್‌ಗಳ ನಡುವೆ ಈಗ ಹೊಸದೊಂದು ಟ್ರೆಂಡ್ ಹುಟ್ಟಿಕೊಂಡಿದ್ದು, ಅದೊಂದು ಸಿಂಡ್ರೋಮ್ ಕೂಡ ಆಗಿದೆ. ಅದುವೇ ‘ಲಕ್ಕಿ ಗರ್ಲ್ ಅಥವಾ ಲಕ್ಕಿ ಪರ್ಸನ್ ಸಿಂಡ್ರೋಮ್’. ಇದೊಂದು ಸಕರಾತ್ಮಕ ಸಿಂಡ್ರೋಮ್ ಆಗಿದ್ದು, ಈ ಲಕ್ಷಣ ಇರುವ ವ್ಯಕ್ತಿಗಳು ತಮ್ಮನ್ನು ತಾವೇ ಅದೃಷ್ಟವಂತರು ಎಂದು ಭಾವಿಸುತ್ತಾರೆ.
ಈ ಲಕ್ಕಿ ಗರ್ಲ್ ಸಿಂಡ್ರೋಮ್‌ನಲ್ಲಿರುವ ವ್ಯಕ್ತಿಗಳು ತಾವೇ ಅದೃಷ್ಟವಂತರು ಎಂದು ಭಾವಿಸುತ್ತಾ ಸದಾ ಒಳ್ಳೆಯದನ್ನೇ ಆಕರ್ಷಿಸುತ್ತಿರುತ್ತಾರೆ. ಈ ಲಕ್ಷಣ ಇರುವ ವ್ಯಕ್ತಿಗಳು ನಾವೇ ಅದೃಷ್ಟವಂತರು, ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುತ್ತಿದೆ. ನಮಗೆ ಎಲ್ಲವೂ ಒಳ್ಳೆಯದೇ ಆಗುತ್ತಿದೆ ಎಂದು ಭಾವಿಸುತ್ತಾರೆ. ಹಾಗೂ ಸಕರಾತ್ಮಕ ಯೋಚನೆಯಲ್ಲೇ ಇರುತ್ತಾರೆ. ಇದರಿಂದ ಅವರ ಜೀವನದಲ್ಲಿ ಅವರ ಇಚ್ಛೆಯಂತೆಯೇ ಫಲಿತಾಂಶ ಸಿಗುತ್ತದೆ. ಉದಾಹರಣೆಗೆ ಅನಿರೀಕ್ಷಿತ ಉತ್ತಮ ಉದ್ಯೋಗ, ಉಡುಗೊರೆಗಳು, ಹೊಸ ಸಂಬಂಧಗಳು, ಸುತ್ತಲಿನ ವಾತಾವರಣ ಹೀಗೆ ಅವರು ನಿಜವಾಗಿಯೂ ಅದೃಷ್ಟವಂತರು ಎಂದು ಭಾವಿಸುವ ಅನೇಕ ಘಟನೆಗಳು ಅವರ ಜೀವನದಲ್ಲಿ ನಡೆಯುತ್ತಿರುತ್ತದೆ.
ಈ ಲಕ್ಕಿ ಗರ್ಲ್ ಸಿಂಡ್ರೋಮ್ ಇರುವವರು ತಮ್ಮ ಅದೃಷ್ಟ ಹೀಗೆ ಉಳಿಸಿಕೊಳ್ಳಬೇಕು ಎಂದು ಪ್ರತಿಯೊಂದರಲ್ಲಿಯೂ ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳುತ್ತಾರೆ. ಈ ಸಿಂಡ್ರೋಮ್ ವ್ಯಕ್ತಿಯ ದುಬಾರಿ ದಿನಚರಿಯನ್ನು ಕಡಿಮೆ ಮಾಡುತ್ತದೆ. ಒಳ್ಳೆಯದನ್ನೇ ಮಾಡಲು ಹಾಗೂ ಯೋಚಿಸಲು ಉತ್ತೇಜಿಸುತ್ತದೆ.
ಈ ಲಕ್ಕಿ ಗರ್ಲ್ ಸಿಂಡ್ರೋಮ್ ಬಗ್ಗೆ ಅನೇಕ ವಾದಗಳಿವೆ. ನಮ್ಮ ಮೆದುಳು ಎಲ್ಲಾ ರೀತಿಯ ಆಲೋಚನೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದು, ಲಕ್ಕಿ ಗರ್ಲ್ ಸಿಂಡ್ರೋಮ್ ಇರುವವರಿಗೆ ಒಳ್ಳೆಯದನ್ನೇ ಯೋಚಿಸುತ್ತಾ, ಕೆಲವು ಮುಖ್ಯವಾದ ಸಮಯದಲ್ಲಿ ಯೋಚನೆ ಬದಲಿಸಬೇಕಾದ ಸಂದರ್ಭದಲ್ಲಿ ಒತ್ತಡ ಎನಿಸುತ್ತದೆ. ಇನ್ನು ಲಕ್ಕಿ ಗರ್ಲ್ ಸಿಂಡ್ರೋಮ್‌ನಲ್ಲಿ ಬದುಕುವವರು ನೈಜತೆಯನ್ನು ಅರ್ಥ ಮಾಡಿಕೊಳ್ಳವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಲಕ್ಕಿ ಗರ್ಲ್ ಸಿಂಡ್ರೋಮ್ ಜನರು ಏನೇ ಇದ್ದರೂ ಸಂತೋಷವಾಗಿರಲು ಒತ್ತಡ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ನೈಜತೆಯನ್ನು ಕೂಡ ಅವರು ಒಪ್ಪಿಕೊಳ್ಳುವುದಿಲ್ಲ. ಎಲ್ಲರಿಗೂ ಎಲ್ಲದೂ ಸಿಗಲು ಸಾಧ್ಯವಿಲ್ಲ. ಹೀಗಿರುವಾಗ ಈ ಲಕ್ಕಿ ಗರ್ಲ್ ಸಿಂಡ್ರೋಮ್‌ನಲ್ಲಿ ಬದುಕುವವರು ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವುದು ಕಷ್ಟ ಎನ್ನುವ ವಾದವೂ ಕೂಡ ಇದೆ. ಒಟ್ಟಾರೆಯಾಗಿ ಈ ಲಕ್ಕಿ ಗರ್ಲ್ ಸಿಂಡ್ರೋಮ್ ಹೆಚ್ಚು ಮುನ್ನೆಲೆಗೆ ಬರುತ್ತಿದ್ದು, ಇದರಿಂದ ಬಹುತೇಕರು ಸಂತೋಷವಾಗಿದ್ದಾರೆ ಎನ್ನುವುದಂತೂ ಸತ್ಯ.
