ಭಾರತ-ಪಾಕಿಸ್ತಾನ ಪಂದ್ಯಕ್ಕೂ ಅಭಿಮಾನಿಗಳ ಬರ: ದುಬಾರಿ ಬೆಲೆ, ಸ್ಟಾರ್ ಆಟಗಾರರ ಗೈರುಹಾಜರಿ ಕಾರಣ?

ಯುಎಇಯಲ್ಲಿ ನಡೆಯುತ್ತಿರುವ 2025 ಏಷ್ಯಾಕಪ್ ಅದ್ಯಾಕೋ ಅಭಿಮಾನಿಗಳಿಗೆ ರುಚಿಸುತ್ತಿಲ್ಲ. ಇದುವರೆಗೆ ನಡೆದಿರುವ 4 ಪಂದ್ಯಗಳಿಗೆ ಅಭಿಮಾನಿಗಳಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಪ್ರಚಾರದ ಕೊರತೆ ಒಂದೆಡೆಯಾದರೆ, ಮತ್ತೊಂದೆಡೆ ಟಿಕೆಟ್‌ಗಳ ಬೆಲೆಯೂ ಕೂಡ ಅಭಿಮಾನಿಗಳ ಗೈರಿಗೆ ಕಾರಣ ಎನ್ನಲಾಗುತ್ತಿದೆ. ನಡೆದಿರುವ 4 ಪಂದ್ಯಗಳಲ್ಲೂ ಬೆರಳೆಣಿಕೆಯಷ್ಟು ಅಭಿಮಾನಿಗಳು ಮಾತ್ರ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಟೂರ್ನಿಯ ಹೈವೋಲ್ಟೇಜ್ ಕದನ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವೆ ಸೆಪ್ಟೆಂಬರ್ 14 ರಂದು ಅಂದರೆ ನಾಳೆ ನಡೆಯಲಿದೆ. ನಾಳೆ ನಡೆಯಲಿರುವ ಪಂದ್ಯಕ್ಕೆ ಇಡೀ ಕ್ರೀಡಾಂಗಣ ಭರ್ತಿಯಾಗಲಿದೆ ಎಂದು ನಿರೀಕ್ಷಿಸಿದ್ದ ಆಯೋಜಕರಿಗೆ ಮರ್ಮಾಘಾತ ಎದುರಾಗಿದೆ.

ನಷ್ಟದ ಸುಳಿಯಲ್ಲಿ ಆಯೋಜಕರು
ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ವಾರಕ್ಕೂ ಮೊದಲೇ ಪಂದ್ಯದ ಟಿಕೆಟ್‌ಗಳು ಮಾರಾಟವಾಗುತ್ತಿದ್ದವು. ಕಾಳ ಸಂತೆಯಲ್ಲೂ ಟಿಕೆಟ್‌ಗಳ ಬೆಲೆ ಗಗನಕ್ಕೇರಿರುತ್ತಿತ್ತು. ಆದರೆ ಉಭಯ ತಂಡಗಳ ನಡುವಿನ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಉಳಿದಿರುವಾಗಲೂ ಅರ್ಧದಷ್ಟು ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ವರದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರದಿದ್ದರೆ, ಆಯೋಜಕರಿಗೆ ನಷ್ಟ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪಂದ್ಯದ ಮೂಲಕ ಇದುವರೆಗೆ ಉಂಟಾಗಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ನೋಡುತ್ತಿದ್ದ ಆಯೋಜಕರು ಮತ್ತೆ ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ದುಬಾರಿ ಟಿಕೆಟ್ ಬೆಲೆ
ವಾಸ್ತವವಾಗಿ ಭಾರತ- ಪಾಕ್ ಪಂದ್ಯಕ್ಕೂ ಅಭಿಮಾನಿಗಳ ಬರ ಉಂಟಾಗಲು ನಾನಾ ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣ ಈ ಪಂದ್ಯಕ್ಕೆ ನಿಗದಿಪಡಿಸಿರುವ ಟಿಕೆಟ್ ಬೆಲೆ. ವರದಿಗಳ ಪ್ರಕಾರ, ವಿಐಪಿ ಸೂಟ್ಸ್ನ 2 ಟಿಕೆಟ್‌ಗಳನ್ನು ಖರೀದಿಸಲು ಬರೋಬ್ಬರಿ 2.5 ಲಕ್ಷ ರೂ.ಗಳನ್ನು ವ್ಯಯಿಸಬೇಕಿದೆ. ಹಾಗೆಯೇ ರಾಯಲ್ ಬಾಕ್ಸ್ ಟಿಕೆಟ್ ಬೆಲೆ 2.3 ಲಕ್ಷ ರೂ.ಗಳಾಗಿದ್ದು, ಸ್ಕೈ ಬಾಕ್ಸ್ ಟಿಕೆಟ್ ಬೆಲೆ 1.6 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಉಳಿದಂತೆ ಪ್ಲಾಟಿನಂ ಟಿಕೆಟ್‌ಗಳ ಬೆಲೆಯೂ ಸಹ 75,659 ರೂ. ಆಗಿದ್ದು, ಇಬ್ಬರಿಗೆ 10,000 ರೂ. ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಆಗಿದೆ. ಹೀಗಾಗಿ ಟಿಕೆಟ್‌ಗಳ ಬೆಲೆಯೂ ಕೂಡ ಅಭಿಮಾನಿಗಳು ನಿರಾಸಕ್ತಿ ತೋರಿಸಲು ಕಾರಣ ಎನ್ನಲಾಗುತ್ತಿದೆ.
ಸ್ಟಾರ್ ಆಟಗಾರರಲಿಲ್ಲ
ಇದಲ್ಲದೆ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಸಾಮರ್ಥ್ಯವಿದ್ದ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಷ್ಯಾಕಪ್ನಲ್ಲಿ ಆಡದಿರುವುದು. ಇವರಿಬ್ಬರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಆದರೆ ಇವರಿಬ್ಬರು ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವುದು ಕೂಡ ಟಿಕೆಟ್ ಮಾರಾಟವಾಗದಿರಲು ಕಾರಣವೆನ್ನಬಹುದು. ಇದು ಟೀಂ ಇಂಡಿಯಾ ಕಥೆಯಾದರೆ, ಪಾಕಿಸ್ತಾನ ತಂಡದಲ್ಲೂ ಸ್ಟಾರ್ ಆಟಗಾರರಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಜ್ವಾನ್ ತಂಡದಲ್ಲಿರುವುದು ಅಭಿಮಾನಿಗಳ ಉತ್ಸಾಹವನ್ನು ಕುಂದಿಸಿದೆ ಎನ್ನಬಹುದು.
